ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಾಗಮಂಗಲ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ 2 ಸಾವಿರದಿಂದ 2 ಲಕ್ಷ ರೂ.ವರೆಗೆ ವೈಯಕ್ತಿಕವಾಗಿ ಪರಿಹಾರ ಧನ ವಿತರಿಸಿದ್ದಾರೆ.
ಬುಧವಾರ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20ಕ್ಕೂ ಅಂಗಡಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಸುಟ್ಟು ಭಸ್ಮ ಮಾಡಿದ್ದರು. ಇದರಿಂದ ಅಂಗಡಿ ಮಾಲೀಕರು ಜೀವನೋಪಾಯಕ್ಕೆ ಆತಂಕ ವ್ಯಕ್ತಪಡಿಸಿದ್ದರು.
ಶುಕ್ರವಾರ ಬೆಳಿಗ್ಗೆ ಗಲಭೆ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟುಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಚರ್ಚಿಸಿ ಮಾಹಿತಿ ಪಡೆದರು. ವಿವಿಧ ಕಡೆ ಹಾನಿಯಾಗಿರುವುದನ್ನು, ವಾಹನಗಳನ್ನು ಸುಟ್ಟುಹೋಗಿರುವುದನ್ನು ಪರಿಶೀಲಿಸಿದರು. ಬಳಿಕ ಪರಿಹಾರದ ಮೊತ್ತವನ್ನು ವಿತರಣೆ ಮಾಡಿದರು.
ಆಸ್ತಿಪಾಸ್ತಿ ಕಳೆದುಕೊಂಡವರಿಗೆ ತಲಾ 25 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿ ವರೆಗೂ ಪರಿಹಾರ ವಿತರಣೆ ಮಾಡಿದರು. ನಷ್ಟ ಆಧರಿಸಿ ಪರಿಹಾರ ವಿತರಣೆ ಮಾಡಿದರು. ಮಾಜಿ ಶಾಸಕ ಸುರೇಶ್ ಗೌಡರ ಮನೆಗೆ ಕರೆಸಿ ಪರಿಹಾರ ಮೊತ್ತ ವಿತರಿಸಿದರು. ಇದೇ ವೇಳೆ ಕಷ್ಟ ಹೇಳಿಕೊಂಡು ಬಂದವರಿಗೂ ಸಣ್ಣಮಟ್ಟದ ಆರ್ಥಿಕ ನೆರವು ನೀಡಿದರು.
ನಾಗಮಂಗಲ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಗಲಾಟೆಯಲ್ಲಿ ಹಾನಿಯಾದ ಅಂಗಡಿ ಮಾಲೀಕರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದೇನೆ. ಸರ್ಕಾರ ಕೂಡಲೇ ಪರಿಹಾರ ನೀಡಿ ಅಂಗಡಿ ಮಾಲೀಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.