ನನ್ನ ಆತ್ಮವಿಶ್ವಾಸ 100 ಪಟ್ಟು ಹೆಚ್ಚಾಗಿದೆ ಎಂದು 6 ತಿಂಗಳ ನಂತರ ಜೈಲಿನಿಂದ ಹೊರಗೆ ಜಾಮೀನಿನ ಮೇಲೆ ಹೊರಗೆ ಬಂದ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮದ್ಯ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜೈಲಿಗೆ ಹೋಗಿದ್ದ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಶುಕ್ರವಾರ ಬೆಳಿಗ್ಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಪ್ರಕರಣದಲ್ಲಿ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿತ್ತು.
ಶುಕ್ರವಾರ ಸಂಜೆ ಜೈಲಿನಿಂದ ಹೊರಗೆ ಬರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಹಾಗೂ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ಇದ್ದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕೆ ಧನ್ಯವಾದಗಳು. ನಾನು ದೇಶಕ್ಕಾಗಿ ಜೀವನ ಮುಡಿಪಾಗಿ ಇಟ್ಟಿದ್ದೇನೆ. ಕೆಲವರು ನನ್ನನ್ನು ಕಷ್ಟಕ್ಕೆ ದೂಡಲು ಪ್ರಯತ್ನಿಸುತ್ತಿದ್ದಾರೆ. ಸತ್ಯದ ದಾರಿಯಲ್ಲಿ ನಡೆಯುತ್ತಿರುವುದರಿಂದ ದೇವರು ನನ್ನ ನೆರವಿಗೆ ಬಂದಿದ್ದಾನೆ ಎಂದು ಹೇಳಿದರು.
ನನ್ನನ್ನು ಕೆಲವರು ಜೈಲಿಗೆ ಹಾಕಿ ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ತರಲು ಪ್ರಯತ್ನಿಸಿದರು. ಆದರೆ ನಾನು ಜೈಲಿಗೆ ಹೋಗಿ ಬಂದ ನಂತರ ನನ್ನ ಆತ್ಮವಿಶ್ವಾಸ ಹಾಗೂ ಶಕ್ತಿ 100 ಪಟ್ಟು ಹೆಚ್ಚಾಗಿದೆ. ದೇವರು ತೋರಿದ ದಾರಿಯಲ್ಲಿ ಮುಂದೆ ಸಾಗುತ್ತೇನೆ. ದೇಶಕ್ಕಾಗಿ ನನ್ನ ಸೇವೆ ಮುಂದುವರಿಯಲಿದೆ. ದೇಶವನ್ನು ಇಬ್ಭಾಗಿಸುವ ಶಕ್ತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಕೇಜ್ರಿವಾಲ್ ಹೇಳಿದರು.