ಈರುಳ್ಳಿ ರಫ್ತು ಮೇಲೆ ನಿಗದಿಪಡಿಸಿದ್ದ ಕನಿಷ್ಠ ಬೆಲೆ ಮಿತಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ.
ರೈತರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಈ ಹಿಂದೆ ನಿಗದಿಪಡಿಸಲಾಗಿದ್ದ ಕನಿಷ್ಠ ದರ ಮಿತಿಯನ್ನು ರದ್ದುಗೊಳಿಸಿದೆ.
ಕೇಂದ್ರ ಸರ್ಕಾರ ಈ ಹಿಂದೆ ರಫ್ತು ಮಾಡುವ ಈರುಳ್ಳಿ ಮೇಲೆ ಕನಿಷ್ಠ ಬೆಲೆ ಮಿತಿಯನ್ನು ಪ್ರತಿ ಟನ್ ಗೆ 550 ಡಾಲರ್ ನಿಗದಿಪಡಿಸಿತ್ತು. ಇದರಿಂದ ರೈತರು ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಈರುಳ್ಳಿಯನ್ನು ರಫ್ತು ಮಾಡುವಂತಿರಲಿಲ್ಲ.
ಶುಕ್ರವಾರ ಹೊರಡಿಸಲಾದ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಇಪಿಯನ್ನು ತೆಗೆದುಹಾಕಿದೆ. ದೇಶದಲ್ಲಿ ಅತೀ ಹೆಚ್ಚು ಈರುಳ್ಳಿ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಈ ಮೂಲಕ ಮಹಾರಾಷ್ಟ್ರ ರೈತರ ಮತದ ಮೇಲೆ ಕಣ್ಣು ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.