ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್ ಮಹಲ್ ನ ಪ್ರಮುಖ ಗುಮ್ಮಟ ಭಾರೀ ಮಳೆಯಿಂದ ಸೋರುತ್ತಿದೆ.
17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ತಾಜ್ ಮಹಲ್ ನ ಪ್ರಮುಖ ಪ್ರಮುಖದಲ್ಲಿ ಯಾವುದೇ ಹಾನಿ ಕಂಡು ಬಾರದೇ ಇದ್ದರೂ ಭಾರೀ ಮಳೆಯಿಂದ ಸೋರಿಕೆಯಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ದೆಹಲಿಯಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಆಗ್ರಾದಲ್ಲಿ ಕೂಡ ಭಾರೀ ಮಳೆಯಾಗುತ್ತಿದೆ.
ಭಾರೀ ಮಳೆಯಿಂದಾಗಿ ತಾಜ್ ಮಹಲ್ ನ ಉದ್ಯಾನವನ ಸಂಪೂರ್ಣ ಮುಳುಗಡೆ ಆಗಿದೆ. ಅಲ್ಲದೇ ಮುಖ್ಯ ಗೋಪುರದಲ್ಲಿ ತೇವಾಂಶ ಹೆಚ್ಚಾಗಿ ಕೂದಲೆಳೆ ಅಂತರದಲ್ಲಿ ಬಿರುಕು ಬಿಟ್ಟಿದೆ ಎಂದು ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.
https://twitter.com/Weathermonitors/status/1834300880340090918
ದೇಶದಲ್ಲಿನ ಐತಿಹಾಸಿಕ ಸ್ಮಾರಕಗಳ ಉಸ್ತುವಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮಳೆ ನೀರು ಸೋರಿಕೆ ವರದಿ ಬೆನ್ನಲ್ಲೇ ಸಿಬ್ಬಂದಿಯನ್ನು ನಿಯೋಜಿಸಿ ಕಣ್ಗಾವಲು ಇರಿಸಿದೆ. ಅಲ್ಲದೇ ಡ್ರೋಣ್ ಕ್ಯಾಮರಾಗಳ ಮೂಲಕ ಪರಿಶೀಲನೆ ನಡೆಸುತ್ತಿದೆ.
ಗುಮ್ಮಟದಲ್ಲಿ ಸೋರಿಕೆ ಕಂಡು ಬಂದ ವರದಿ ಬೆನ್ನಲ್ಲೇ ಪರಿಶೀಲನೆ ನಡೆಸಿದ್ದೇವೆ. ಆದರೆ ಗುಮ್ಮಟದಲ್ಲಿ ಯಾವುದೇ ಬಿರುಕು ಕಂಡು ಬಂದಿಲ್ಲ. ನಾವು ಡ್ರೋಣ್ ಕ್ಯಾಮರಾ ಮೂಲಕ ಪರಿಶೀಲಿಸಿದಾಗ ಗುಮ್ಮಟ ತೇವಗೊಂಡು ಸೋರುತಿರುವುದು ತಿಳಿದು ಬಂದಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.