ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲಿಗೆ ಚಾಲನೆ ನೀಡುವ ಕೊನೆಯ ಗಳಿಗೆಯಲ್ಲಿ `ನಮೋ ಭಾರತ್ ರ್ಯಾಪಿಡ್ ರೈಲು’ ಎಂದು ಮರು ನಾಮಕರಣ ಮಾಡಲಾಗಿದೆ.
ಅಹಮದಾಬಾದ್ ಮತ್ತು ಭುಜ್ ನಡುವೆ ಸಂಚರಿಸಲಿರುವ ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಸೋಮವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದ ವಂದೇ ಭಾರತ್ ಮೆಟ್ರೋ ರೈಲು ಅಹಮದಾಬಾದ್ ನಿಂದ ಭುಜ್ ವರೆಗಿನ 359 ಕಿ.ಮೀ. ದೂರವನ್ನು 5.45 ಗಂಟೆಗಳಲ್ಲಿ ಕ್ರಮಿಸಲಿದೆ ಎಂದು ರೈಲ್ವೆ ಸಚಿವಾಲಯವು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 17ರಿಂದ ಈ ರೈಲು ಸಾರ್ವಜನಿಕರ ಸೇವೆ ಅಧಿಕೃತವಾಗಿ ಆರಂಭಿಸಲಿದೆ. ಅಹಮದಾಬಾದ್ ನಿಂದ ಹೊರಡಲಿರುವ ಈ ರೈಲಿನ ಒಟ್ಟಾರೆ ಟಿಕೆಟ್ ದರ 455 ರೂ. ಆಗಿದೆ.
ಗರಿಷ್ಠ 100 ಕಿ.ಮೀ ವೇಗದಲ್ಲಿ ಚಲಿಸಲಿರುವ ನಮೋ ಭಾರತ್ ರ್ಯಾಪಿಡ್ ರೈಲಿನಲ್ಲಿ 12 ಬೋಗಿಗಳಿದ್ದು, 1150 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಆಧುನಿಕ ಒಳಾಂಗಣ ಮತ್ತು ಸುಖಾಸಿನ ಆಸನಗಳನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.