ನಾನು ನಿಂದಿಸಿಲ್ಲ. ಈ ಧ್ವನಿ ನನ್ನದಲ್ಲ ಎಂದು ಶಾಸಕ ಮುನಿರತ್ನ ತಿರುಪತಿಗೆ ಬಂದು ದೇವರ ಮುಂದೆ ಪ್ರಮಾಣ ಮಾಡಿದರೆ ಸಾಕು ದೂರು ವಾಪಸ್ಸು ಪಡೆಯುವೆ ಎಂದು ಗುತ್ತಿಗೆದಾರ ಚೆಲುವರಾಜು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸಕ್ಕೆ ಸೋಮವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮುನಿರತ್ನ ತನ್ನ ಹೆಂಡತಿ ಮತ್ತು ತಾಯಿಯ ವಿರುದ್ಧ ಕೀಳಾಗಿ ಮಾತನಾಡಿದ್ದು ನಿಜ. ಈ ವೀಡಿಯೋ ಮಾಡಿದ್ದು ನಾನೇ ಬಿಡುಗಡೆ ಮಾಡಿದ್ದೂ ನಾನೇ ಎಂದರು.
ಆಡೀಯೋ ಮತ್ತು ವೀಡಿಯೋದಲ್ಲಿ ಮುನಿರತ್ನ ಒಳ್ಳೆಯವರು ಅಂತ ಹೇಳಿದ್ದು ನಿಜ. ಸ್ಥಳೀಯ ಶಾಸಕರನ್ನು ಎದುರು ಹಾಕಿಕೊಂಡು ನಾವು ಇರೋಕೆ ಆಗುತ್ತಾ? ಹಾಗಾಗಿ ಅವರು ಒಳ್ಳೆಯವರು ಅಂತ ಹೇಳಿಕೊಂಡಿದ್ದೆ. ಆದರೆ ಮನೆಯ ಹೆಂಗಸರ ಬಗ್ಗೆ ಜಾತಿಯ ಬಗ್ಗೆ ಕೀಳಾಗಿ ಮಾತನಾಡಿದಾಗ ಸಹಿಸಲು ಆಗಲಿಲ್ಲ ಎಂದು ಅವರು ಹೇಳಿದರು.
ಮುನಿರತ್ನ ವೀಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ. ನಾನು ಆ ರೀತಿ ಮಾತನಾಡಿಲ್ಲ ಎಂದು ತಿರುಪತಿಗೆ ಬಂದು ದೇವರ ಮುಂದೆ ನಮಸ್ಕಾರ ಮಾಡಿದರೂ ಸಾಕು. ನಾನು ಇವತ್ತೇ ಪ್ರಕರಣ ವಾಪಸ್ ಪಡೆಯುತ್ತೇನೆ. ಇನ್ನೆರಡು ದಿನದಲ್ಲಿ ಮುನಿರತ್ನ ಅವರ ಇನ್ನೆರಡು ವೀಡಿಯೋ ಆಡೀಯೋ ಬಿಡುಗಡೆ ಮಾಡುತ್ತೇನೆ ಎಂದು ಚೆಲುವರಾಜು ಹೇಳಿದರು.
ಇದೇ ವೇಳೆ ಚಲುವರಾಜ ಪತ್ನಿ ಘಟನೆಯಿಂದ ನಮಗೆ ಭಯವಾಗಿದ್ದು, ಭದ್ರತೆ ಒದಗಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿದರು. ಸಚಿವೆ ಭದ್ರತೆ ಒದಗಿಸುವ ವಿಶ್ವಾಸ ನೀಡಿದರು.