Friday, November 22, 2024
Google search engine
Homeತಾಜಾ ಸುದ್ದಿಎಚ್ ಡಿಕೆ, ಬಿಎಸ್ ವೈ ನನ್ನನ್ನು ಮುಗಿಸ್ತೀನಿ ಅಂತ ಅಂದುಕೊಂಡಿದ್ದರೆ ಭ್ರಮೆ: ಸಿಎಂ ಸಿದ್ದರಾಮಯ್ಯ

ಎಚ್ ಡಿಕೆ, ಬಿಎಸ್ ವೈ ನನ್ನನ್ನು ಮುಗಿಸ್ತೀನಿ ಅಂತ ಅಂದುಕೊಂಡಿದ್ದರೆ ಭ್ರಮೆ: ಸಿಎಂ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ನನ್ನನ್ನು ಮುಗಿಸ್ತೀನಿ ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ನನ್ನನ್ನು ಅಷ್ಟು ಸುಲಭ ಅಂದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕಲಬುರಗಿ ತಾಲ್ಲೂಕಿನ‌ ಕವಲಗಿ (ಕೆ) ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣ ಜಯಂತ್ಸೋತ್ಸವ ಉದ್ಘಾಟಿಸಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬ್ರಿಟಿಷರ ಜೊತೆ ನಮ್ಮವರು ಕೈಜೋಡಿಸಿದ್ದರಿಂದಲೇ 200 ವರ್ಷ ಗುಲಾಮಗಿರಿ ಅನುಭವಿಸಿದೆವು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟವರು ನಮ್ಮವರೇ ಆದ ಮನೆ ಮುರುಕರು. ನಮ್ಮ ಸಮಾಜದಲ್ಲೇ ಇಂಥಹ ಮನೆ ಮುರುಕರು ಹಿಂದೆಯೂ ಇದ್ದರು. ಮುಂದೆಯೂ ಇರುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಬಡವರ, ಮದ್ಯಮ ವರ್ಗದವರ ಕಲ್ಯಾಣಕ್ಕೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಕ್ಕೆ ಪಟ್ಟಭದ್ರರು ಷಡ್ಯಂತ್ರ ನಡೆಸುತ್ತಿದ್ದಾರೆ. 40 ವರ್ಷದಿಂದ ಸಣ್ಣ ತಪ್ಪು ಮಾಡದವನು ಈಗ ಮಾಡ್ತೀನಾ? ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಅವರು ಪುನರುಚ್ಚರಿಸಿದರು.

ಮುಡಾ ಪ್ರಕರಣದಲ್ಲಿ ಏನೇನೂ ಇಲ್ಲ. ಆದರೂ BJP, JDS ನಾಯಕರು ಡೆಲ್ಲಿಯಿಂದ ರಾಜಭವನದವರೆಗೂ ಪಿತೂರಿ ಹೆಣೆಯುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿ ಆಗಲು ಬಿಡಬಾರದು. ಸಂಗೊಳ್ಳಿರಾಯಣ್ಣನ ಹೋರಾಟದ ಕಿಚ್ಚು ನಮ್ಮೊಳಗಿದೆ ಎಂದು ಎಚ್ಚರಿಸಿದರು.

ಡಾ.ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದಾಗಿ ನಾನು ಮುಖ್ಯಮಂತ್ರಿ‌ ಆಗಿದ್ದೇನೆ. ಬಾಬಾ ಸಾಹೇಬರ ಆಶಯದಂತೆ ನಾನು ಎಲ್ಲಾ ಜಾತಿ, ಜನ ವರ್ಗಗಳಿಗೆ, ಮಹಿಳೆಯರಿಗೆ ಆರ್ಥಿಕ‌ ಶಕ್ತಿ ನೀಡುತ್ತಿದ್ದೇನೆ ಎಂದರು.

ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ. ನಾವು ನಮ್ಮ ಜನರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು ಎಂದು ತೀರ್ಮಾನಿಸಿದರೆ ನರೇಂದ್ರ ಮೋದಿಯವರು ಅಕ್ಕಿ ಕೊಡಲು ಬಿಡಲಿಲ್ಲ. ಅದಕ್ಕಾಗಿ ನಾವು ಅಕ್ಕಿ ಬದಲಿಗೆ 5ಕೆಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ನಾನು ಕೊಡುತ್ತಿರುವುದರಿಂದ ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಅವರ ಯತ್ನ ಸಕ್ಸಸ್ ಆಗಲು ಬಿಡಬೇಡಿ ಎಂದು ಕರೆ ನೀಡಿದರು.

ಪಟ್ಟಭದ್ರ ಹಿತಾಸಕ್ತಿಗಳೇ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟರು, ಬಸವಣ್ಣನವರನ್ನು ಆಸ್ಥಾನದಿಂದ ಓಡಿಸಿಬಿಟ್ಟರು. ಹೀಗಾಗಿ ಈ ಬಿಜೆಪಿ ಮತ್ತು ಜೆಡಿಎಸ್ ನವರ ಬಗ್ಗೆ ಎಚ್ಚರದಿಂದ ಇರಿ. ನಾನು ಹಿಂದುಳಿದ ಸಮಾಜದಲ್ಲಿ ಜನಿಸಿ ಬಡತನ ಅಂದರೆ ಏನು, ಗ್ರಾಮಗಳ ಸ್ಥಿತಿ ಹೇಗಿದೆ ಎಂದು ಅರ್ಥಮಾಡಿಕೊಂಡಿದ್ದೇನೆ. ಬಡತನ ಹೋಗಲಾಡಿಸಲು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಕಲಬುರಗಿಯ ಕವಲಗಿಯ 14 ಹಳ್ಳಿಗಳಿಗೆ ಅನುಕೂಲ ಆಗುವ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಜಿಲ್ಲೆಯ ಶಾಸಕರು, ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ತಿಂಥಣಿ ಕಾಗಿನೆಲೆ ಪೀಠದ ಜಗದ್ಗುರು ಸಿದ್ದರಾಮಾನಂದಪುರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments