ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನನ್ನು ಥಳಿಸಿದ ಗ್ರಾಮಸ್ಥರು ಗ್ರಾಮದಿಂದ ಬಹಿಷ್ಕರಿಸಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲ್ವತ್ ಗ್ರಾಮದಲ್ಲಿ ನಡೆದಿದೆ.
ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಅರ್ಜುನ್ ಮಾದರ್ ಎಂಬಾತನ ಮೇಲೆ ದೌರ್ಜನ್ಯ ನಡೆದಿದೆ. ದೂರು ಆಧರಿಸಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಗಲ್ವಾತ್ ಗ್ರಾಮದ ದ್ಯಾವಮ್ಮ ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ಗ್ರಾಮಸ್ಥರು ಅರ್ಜುನ್ ಮಾದರ್ ನನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದ್ದು, ನಂತರ ಗ್ರಾಮದಿಂದ ಬಹಿಷ್ಕರಿಸಿದ್ದರು.
ಅರ್ಜುನ್ ಮಾದರ್ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ದಲಿತ ಸಂಘಟನೆಗಳು ನೆರವಿಗೆ ಬಂದಿದ್ದು, ಆಧುನಿಕ ಕಾಲದಲ್ಲೂ ದಲಿತರ ಮೇಲೆ ದೌರ್ಜನ್ಯ ನಡೆಸುವುದನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಪ್ರಗತಿ ಹಂತದಲ್ಲಿದ್ದು, ಶೀಘ್ರದಲ್ಲೇ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿಆರ್ ತಿಮ್ಮಾಪುರ ತಿಳಿಸಿದ್ದಾರೆ.
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ದಲಿತರು ಮೇಲ್ಜಾತಿಯವರ ಬಡಾವಣೆಗೆ ತೆರಳದಂತೆ ಹಾಗೂ ದಲಿತರ ಏರಿಯಾಗೆ ಮೇಲ್ಜಾತಿಯವರು ಭೇಟಿ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಸ್ಥಳೀಯ ಜಿಲ್ಲಾಡಳಿತ ಸೂಚನೆ ನೀಡಿದೆ.