ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಒಂದು ದೇಶ, ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಒಂದು ದೇಶ, ಒಂದು ಚುನಾವಣೆಗೆ ಮಾಜಿ ರಾಷ್ಟ್ರಪತಿ ಕೋವಿಂದ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಅಂಗೀಕರಿಸಲಾಯಿತು.
ಮಾಜಿ ರಾಷ್ಟ್ರಪತಿ ರಾಮನಾಥನ್ ಕೋವಿಂದ್ ನೇತೃತ್ವದ ಸಮಿತಿ ಸಲ್ಲಿಸಿದ್ದ ಒಂದು ದೇಶ, ಒಂದು ಚುನಾವಣೆ ಕುರಿತ ವರದಿಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸುವ ಮೂಲಕ ದೇಶಾದ್ಯಂತ ಏಕಕಾಲದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಯನ್ನು ನಡೆಸುವ ಪ್ರಕ್ರಿಯೆಗೆ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದ 100 ದಿನದಲ್ಲಿ ಸ್ಥಳೀಯ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಒಂದು ದೇಶ ಒಂದು ಚುನಾವಣೆಯ ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವಾಗಿದೆ.
ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿಯೇ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತ ಇದ್ದರೆ ರಾಜ್ಯಸಭೆಯಲ್ಲಿ ಬಹುಮತದ ಗಡಿ ತಲುಪಿದೆ. ಆದರೆ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಬೇಕಾದರೆ ರಾಜ್ಯ ಸರ್ಕಾರಗಳು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳು ಒಪ್ಪಿದರೆ ಮಾತ್ರ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
ಒಂದು ದೇಶ ಒಂದು ಚುನಾವಣೆಗೆ ಪರಿಣಾಮಕಾರಿ ಆಡಳಿತ ನಡೆಸುವುದು ಹಾಗೂ ಚುನಾವಣಾ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಜಾರಿಗೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಅಜೆಂಡಾ ಆಗಿದೆ. ಈ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದ್ದರೂ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.