ಆಂಬುಲೆನ್ಸ್ ಸಿಗದ ಕಾರಣ ಮಕ್ಕಳು ತಂದೆಯ ಮೃತದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ದಳವಾಯಿಹಳ್ಳಿ ಗ್ರಾಮದ 80 ವರ್ಷದ ವೃದ್ಧ ಗುಡುಕಲ್ಲು ಹೊನ್ನೂರಪ್ಪ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಶವವನ್ನು ಸಾಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಲ್ಲದ ಕಾರಣ ಮಕ್ಕಳು ಪರದಾಡಿದರು. ಸಾಕಷ್ಟು ಪ್ರಯತ್ನದ ನಂತರವೂ ಯಾವುದೇ ಆಂಬುಲೆನ್ಸ್ ಸಿಗದ ಕಾರಣ ಮಕ್ಕಳು ಬೈಕ್ ನಲ್ಲಿಯೇ ಶವ ಸಾಗಿಸಿದ್ದಾರೆ.
ಸ್ಥಳೀಯ ಶಾಸಕ ವೆಂಕಟೇಶ್ ಅವರಿಗೆ ಸಂಬಂಧಿಕರು ಕರೆ ಮಾಡಿ ಕನಿಷ್ಠ ಆಂಬುಲೆನ್ಸ್ ಸೇವೆಯೂ ಇಲ್ಲದೇ ಆಗುತ್ತಿರುವ ಸಮಸ್ಯೆ ಹಾಗೂ ಪ್ರಾಥಮಿಕ ಆರೋಗ್ಯದ ಅವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ. ಶಾಸಕರು ವೈದ್ಯರಿಗೆ ಕರೆ ಮಾಡಿದಾಗ 108 ವಾಹನದಲ್ಲಿ ಶವ ಸಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಧಿ ಇಲ್ಲದೆ ಹೊನ್ನೂರಪ್ಪನ ಮಕ್ಕಳು ತಮ್ಮ ತಂದೆಯ ಮೃತ ದೇಹವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದಾರೆ. ವೈ.ಎನ್.ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹೋಬಳಿ ಕೇಂದ್ರಕ್ಕೆ ಸುಮಾರು 15 ಸಾವಿರ ಜನ ಸೇರಿದಂತೆ ಸುತ್ತಮುತ್ತಲಿನ ಸುಮಾರು 34 ಹಳ್ಳಿಗಳ ರೋಗಿಗಳು ಭೇಟಿ ನೀಡುತ್ತಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಸೇವೆ ನಿಂತು ವರ್ಷಗಳೇ ಕಳೆದಿವೆ, ಹಲವಾರು ಬಾರಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಲುಪಿಸಿದರೂ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೇ ಅನೇಕ ಅವಘಡಗಳಿಗೆ ಕಾರಣವಾಗಿವೆ.