ತವರಿನ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡ ಮತ್ತು ಬಾಂಗ್ಲಾ ಹುಲಿ ಎಂದೇ ಹೆಸರಾಗಿರುವ ಬಾಂಗ್ಲಾದೇಶ ತಂಡ ಚೆನ್ನೈನಲ್ಲಿ ಗುರುವಾರ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಭಾರತ ತಂಡ ಟೆಸ್ಟ್ ಚಾಂಪಿಯನ್ ಫೈನಲ್ ಗೆ ಅರ್ಹತೆ ಪಡೆಯಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೇ ನೂತನ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಆರಂಭ ಪಡೆಯುವ ವಿಶ್ವಾಸದಲ್ಲಿದೆ.
ಭಾರತ ತಂಡ ಟಿ-20 ವಿಶ್ವಕಪ್ ಚಾಂಪಿಯನ್ ಆದ ನಂತರ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯವಾಗಿದ್ದು, ಆಟಗಾರರು ಐಪಿಎಲ್, ಟಿ-20 ವಿಶ್ವಕಪ್ ನಿಂದ ಹೊರಗೆ ಬರಬೇಕಿದೆ. ಅಲ್ಲದೇ 6 ತಿಂಗಳ ನಂತರ ಆಡುತ್ತಿರುವ ಮೊದಲ ಟೆಸ್ಟ್ ಆಗಿರುವುದರಿಂದ ಆಟಗಾರರು ಲಯ ಕಂಡುಕೊಳ್ಳುವ ದೊಡ್ಡ ಸವಾಲು ಎದುರಿಸಬೇಕಾಗಿದೆ. ಏಕೆಂದರೆ ಮುಂದಿನ 4 ತಿಂಗಳಲ್ಲಿ 10 ಟೆಸ್ಟ್ ಆಡಬೇಕಾದ ದೊಡ್ಡ ಸವಾಲು ಮುಂದಿದೆ.
ನಾಯಕ ರೋಹಿತ್ ಶರ್ಮ ಬಾಂಗ್ಲಾದೇಶ ವಿರುದ್ಧದ ಪಂದ್ಯ ಆಟಗಾರರು ಟೆಸ್ಟ್ ಗೆ ಹೊಂದಿಕೊಳ್ಳಲು ಅಭ್ಯಾಸ ಪಂದ್ಯವಾಗಿದೆ. ಏಕೆಂದರೆ ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗಾವಸ್ಕರ್ ಸರಣಿ ಇದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಜಸ್ ಪ್ರೀತ್ ಬುಮ್ರಾ ಸಾಕಷ್ಟು ವಿಶ್ರಾಂತಿ ನಂತರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಭಾರತ ತಂಡ ಸದೃಢವಾಗಿ ಕಂಡು ಬಂದರೂ ಮೈದಾನದಲ್ಲಿನ ಪ್ರದರ್ಶನ ಪ್ರಮುಖವಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್, ಧ್ರುವ ಜುರೆಲ್ ಸ್ಥಾನ ಪಡೆದಿದ್ದು, ಅವರ ಪ್ರದರ್ಶನದ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೇ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಕೂಡ ಸ್ಥಾನ ಪಡೆದಿರುವುದರಿಂದ ವಿಕೆಟ್ ಕೀಪರ್ ಸ್ಥಾನಕ್ಕೆ ಪೈಪೋಟಿ ಹೆಚ್ಚಿದೆ.
ಮತ್ತೊಂದೆಡೆ ಬಾಂಗ್ಲಾದೇಶ ತಂಡವನ್ನು ಕೂಡ ಕಡೆಗಣಿಸುವಂತಿಲ್ಲ. ಸಾಧಾರಣ ತಂಡವಾಗಿದ್ದರೂ ಭಾರತದ ಗೆಲುವಿಗೆ ಅಡ್ಡಿಯಾಗಬಲ್ಲ ಹಲವು ಪ್ರಮುಖ ಆಟಗಾರರಿದ್ದಾರೆ. ನಾಯಕ ನಜ್ಮುಲ್ ಹುಸೇನ್ ಶಾಂತೊ, ಹಸನ್ ಮಹೂದ್, ನಹೀದ್ ರಾಣಾ, ತಸ್ಕಿನ್ ಅಹ್ಮದ್, ಶಕೀಬ್ ಅಲ್ ಹಸನ್, ಮೆಹಿಡೆ ಹಸನ್ ಮಿರಾಜ್ ಮುಂತಾದ ಹಲವು ಆಟಗಾರರು ಪಂದ್ಯದ ದಿಕ್ಕು ಬದಲಿಸಬಲ್ಲರು.
ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ, ಸ್ಥಳ: ಚೆನ್ನೈ