ಬೆಂಗಳೂರಿನಲ್ಲಿ ಮುಸ್ಲಿಮ್ ಸಮುದಾಯದ ಹೆಚ್ಚಿರುವ ಪ್ರದೇಶವನ್ನು `ಪಾಕಿಸ್ತಾನ’ ಎಂದು ಹೇಳಿಕೆ ನೀಡಿದ್ದ ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ನ್ಯಾಯಾಧೀಶ ವೇದವ್ಯಾಸ್ ಆಚಾರ್ ಶ್ರೀಶನಾಂದ ಭೂವಿವಾದ ಪ್ರಕರಣದ ವಿಚಾರಣೆ ವೇಳೆ ಬೆಂಗಳೂರಿನಲ್ಲಿರುವ ಮುಸ್ಲಿಮರ ಪ್ರಾಬಲ್ಯದ ಪ್ರದೇಶವನ್ನು ಪಾಕಿಸ್ತಾನ ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್.ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಎಚ್.ರಾಯ್ ಮತ್ತು ನ್ಯಾಯಮೂರ್ತಿ ಎಸ್.ಕಾಂತ್ ಅವರನ್ನೊಳಗೊಂಡ ಪಂಚ ಸದಸ್ಯ ಪೀಠ ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣೆ ಸಂದರ್ಭದಲ್ಲಿ ನೀಡುವ ಹೇಳಿಕೆಗಳಿಗೆ ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆ ವೇಳೆ ನ್ಯಾಯಾಧೀಶ ವೇದವ್ಯಾಸ್ ಆಚಾರ್ ಶ್ರೀಶನಾಂದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ನ್ಯಾಯಾಧೀಶರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರು ರಾಜಕಾರಣಿಗಳ ತರಹ ಮಾತನಾಡುವಂತೆ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ನ್ಯಾಯಾಲಯ ಕಲಾಪಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವ ವ್ಯವಸ್ಥೆ ಇರುವಾಗ ನ್ಯಾಯಾಧೀಶರು ಕಮೆಂಟ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ನ್ಯಾಯಾಧೀಶರಿಗೆ ಮಾರ್ಗಸೂಚಿ ಹೊರಡಿಸುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ ನಲ್ಲಿ ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಮತ್ತು ಸೊಲಿಸಿಟರ್ ಜನರಲ್ ಅವರಿಂದ ಮಾಹಿತಿ ಕೇಳಲಾಗಿದೆ. ಅಲ್ಲದೇ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆ 2 ವಾರಗಳ ಕಾಲ ನಡೆಯಲಿದೆ. ನಂತರ ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.