Thursday, November 21, 2024
Google search engine
Homeಜಿಲ್ಲಾ ಸುದ್ದಿಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಹಂಪಾ ನಾಗರಾಜಯ್ಯ ಅವರಿಂದ ಮೈಸೂರು ದಸರಾ ಉದ್ಘಾಟಿಸಲಾಗುವುದು ಎಂದರು.

ಇದೇ ವೇಳೆ ಶಾಸಕ ಮುನಿರತ್ನ ಅವರ ಮೇಲೆ ಮೇಲಿನ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್.ಐ ಟಿಗೆ ವಹಿಸಬೇಕೆಂದು  ಇಂದು ತಮ್ಮನ್ನು ಭೇಟಿ ಮಾಡಿದ  ಒಕ್ಕಲಿಗ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲಿಯೇ ಏರ್ಪಡಿಸುವಂತೆ ಕೆ.ಪಿ.ಎಸ್.ಸಿ ಗೆ ಸೂಚಿಸಲಾಗಿದೆ. ಕಾನ್ ಸ್ಟಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದರು.

60 ಸಾವಿರ ಗಣೇಶ ಪ್ರತಿಷ್ಠಾಪನೆ

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಾರಿ ಅರವತ್ತು ಸಾವಿರ ಗಣೇಶಗಳ ಪ್ರತಿಷ್ಠಾಪನೆಯಾಗಿತ್ತು. ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಗಮಂಗಲದಲ್ಲಿ ಗಲಭೆ ನಡೆದಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದ್ದು, ಡಿವೈಎಸ್ಪಿ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಡಿನೋಟಿಫೈ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ಬಗ್ಗೆ ಪರಿಶೀಲನೆ:

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪರವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021 ರಿಂದ ಲೋಕಾಯುಕ್ತದವರು ತನಿಖೆ ನಡೆಸದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಿನ್ನೆ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿದಂತೆ ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು, ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿ ,  ಜಿಪಿಓ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.

ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಎಂಡ್ ರನ್ ಮಾಡುವವರಾಗಿದ್ದು, ಯಾವ ಆರೋಪಕ್ಕೂ ತಾರ್ಕಿಕ  ಅಂತ್ಯ ಕಾಣಿಸುವುದಿಲ್ಲ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments