ಚಲಿಸುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ ಹೃದಯಾಘಾತವಾಗಿದ್ದು, ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ 45 ಪ್ರಯಾಣಿಕರ ಜೀವ ಉಳಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆ ಬಳಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಚಾಲಕ ವೀರೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
KA-51-AJ-6905 ಸಂಖ್ಯೆಯ ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದಾಗ ಚಾಲಕ ವೀರೇಶ್ ಗೆ ಹೃದಯಾಘಾತ ಸಂಭವಿಸಿದೆ. ಇದರಿಂಧ ನಡುರಸ್ತೆಯಲ್ಲೇ ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಏಕಾಏಕಿ ಬಸ್ ನಿಧಾನಗೊಂಡಿದ್ದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಕೂಡಲೇ ಬಸ್ ಬಳಿ ಬಂದಿದ್ದಾರೆ.
ಹಲಸೂರು ಟ್ರಾಫಿಕ್ ಪೊಲೀಸ್ ಆರ್. ರಘುಕುಮಾರ್ ಬಸ್ ಬಳಿ ಬಂದು ನೋಡಿದಾಗ, ಚಾಲಕ ಎದೆ ಬಿಗಿ ಹಿಡಿದುಕೊಂಡು ಒಂದು ಕಡೆಗೆ ವಾಲಿದ್ದನ್ನು ಗಮನಿಸಿದ್ದಾರೆ. ಕೂಡಲೇ ಹ್ಯಾಂಡ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿ, ಚಾಲಕನ್ನು ಕೆಳಗಿಳಿಸಿದ್ದಾರೆ. ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಅಪಘಾತವನ್ನು ತಡೆದು 45 ಪ್ರಯಾಣಿಕರನ್ನು ಪಾರು ಮಾಡಿದ್ದಾರೆ.
ಚಾಲಕ ವೀರೇಶ್ ನನ್ನು ಅಂಬುಲೆನ್ಸ್ ಗೂ ಕಾಯದೇ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.