ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎಂಬ ವಿಷಯ ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಹಿಂದೂಗಳಲ್ಲಿ ಅದರಲ್ಲೂ ಸಸ್ಯಹಾರಿಗಳ ಪಾವಿತ್ರ್ಯತೆ ಮತ್ತು ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗಿದೆ ಎಂಬ ಚರ್ಚೆ ಆರಂಭವಾಗಿದೆ.
ಇದೀಗ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಿತ ತಿರುಪತಿ ತಿಮ್ಮಪ್ಪನ ಜನಪ್ರಿಯ ಲಡ್ಡು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಲಾಗುತ್ತಿತ್ತು. ಅಲ್ಲದೇ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲೂ ಇದೇ ಲಡ್ಡುಗಳು ಹಂಚಲಾಗಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಮಾಜಿ ಸಿಎಂ ಜಗಮೋಹನ್ ರೆಡ್ಡಿ ಪ್ರತಿಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ಪ್ರಧಾನಿ ಮೋದಿಗೆ ತಿರುಮತಿ ತಿಮ್ಮಪ್ಪನ ಲಡ್ಡುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೇ ಜನವರಿಯಲ್ಲಿ ನಡೆದ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 1 ಲಕ್ಷ ತಿರುಪತಿ ಲಡ್ಡುಗಳನ್ನು ಕಳುಹಿಸಿಕೊಡಲಾಗಿತ್ತು. ಈ ಲಡ್ಡುಗಳು ಕೂಡ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಣಗೊಂಡಿತ್ತು ಎನ್ನಲಾಗಿದೆ.
ವೈಷ್ಣವರು ಶುದ್ಧ ಸಸ್ಯಹಾರಿಗಳಾಗಿದ್ದು, ಬೆಳ್ಳುಳ್ಳಿಯನ್ನು ಸಹ ಸೇವಿಸುವುದಿಲ್ಲ. ಅಂತಹದ್ದರಲ್ಲಿ ಅವರ ಅರಿವಿಗೆ ಬಾರದೇ ಸೇವಿಸಿದ ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಬೆರೆಸಲಾಗಿತ್ತು ಎಂಬ ಅಂಶ ಸಹಿಸಲು ಸಾಧ್ಯವಿಲ್ಲ ಎಂದು ಅಯೋಧ್ಯೆಯ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ 2019ರಿಂದ 2024ರ ಅವಧಿಯಲ್ಲಿ ಆಗಿದೆ ಎಂಬ ವಾದವನ್ನು ಜಗಮೋಹನ್ ರೆಡ್ಡಿ ನಿರಾಕರಿಸಿದ್ದು, ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬು ಬೆರೆತಿದೆ ಎಂಬ ಆರೋಪ ರಾಜಕೀಯ ಉದ್ದೇಶಗಳಿಗೆ ಮಾಡಲಾಗುತ್ತಿದೆ. ನನ್ನ ಅವಧಿಯಲ್ಲಿ ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.