ಆರಂಭಿಕ ಶುಭಮನ್ ಗಿಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ 515 ರನ್ ಗಳ ಬೃಹತ್ ಮೊತ್ತದ ಗುರಿ ಒಡ್ಡಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 3 ವಿಕೆಟ್ ಗೆ 81 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮದ ನಂತರ 4 ವಿಕೆಟ್ ಗೆ 287 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 227 ರನ್ ಗಳ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾದೇಶ ತಂಡಕ್ಕೆ 515 ರನ್ ಗಳ ಗುರಿ ನೀಡಲಾಗಿದೆ.
ಎರಡನೇ ಇನಿಂಗ್ಸ್ ನಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ವೈಯಕ್ತಿಕ ಶತಕಗಳನ್ನು ಬಾರಿಸಿ ಭಾರತ ತಂಡವನ್ನು ಆಧರಿಸಿದರು. ಇವರಿಬ್ಬರು 4ನೇ ವಿಕೆಟ್ ಗೆ 167 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು.
ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಗಿಲ್ 176 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 119 ರನ್ ಬಾರಿಸಿ ಔಟಾಗದೇ ಉಳಿದರು. ಇದು ಗಿಲ್ ಗೆ 4ನೇ ಟೆಸ್ಟ್ ಶತಕವಾಗಿದೆ. ರಿಷಭ್ ಪಂತ್ 128 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 109 ರನ್ ಸಿಡಿಸಿ ನಿರ್ಗಮಿಸಿದರು. ಇದು ಪಂತ್ ಗೆ 5ನೇ ಟೆಸ್ಟ್ ಶತಕವಾಗಿದೆ.
ಮೊದಲ ಇನಿಂಗ್ಸ್ ನಲ್ಲಿ ವಿಫಲರಾಗಿದ್ದ ಕೆಎಲ್ ರಾಹುಲ್ 19 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 22 ರನ್ ಬಾರಿಸಿ ಔಟಾಗದೇ ಉಳಿದರು. ಬಾಂಗ್ಲಾದೇಶ ಪರ ಮೆಹದಿ ಹಸನ್ 2 ವಿಕೆಟ್ ಪಡೆದರು.