ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿ ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ `ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ: ನೂತನ 65 ಆ್ಯಂಬುಲನ್ಸ್’ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದೇ ಇಲ್ಲ. ಕುಡಿದು ವಾಹನ ಓಡಿಸುವುದನ್ನು ನೂರಕ್ಕೆ ನೂರರಷ್ಟು ನಿಲ್ಲಿಸಿ. ನಿಮ್ಮ ಕುಟುಂಬಗಳನ್ನು ಅನಾಥ ಮಾಡಬೇಡಿ ಎಂದು ಹೇಳಿದರು.
ಮೊಬೈಲ್ ಮಾತಾಡಿಕೊಂಡು ವಾಹನ ಓಡಿಸಿದರೆ ಅಪಘಾತಗಳಾಗದೆ ಇರುತ್ತದಾ? ಎಂದು ಪ್ರಶ್ನಿಸಿದ ಸಿಎಂ, ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಸೇರಿ ಹಲವು ಮುಖಂಡರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.