ಇಸ್ರೇಲ್ ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಲೆಬೆನಾನ್ ನ ಹಲವೆಡೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಹೆಜಾಬುಲ್ಲಾ ಇಸ್ರೇಲ್ ಮೇಲೆ 200 ರಾಕೆಟ್ ಗಳ ಪ್ರತಿದಾಳಿ ನಡೆಸಿದೆ.
ಹೆಜಾಬುಲ್ಲಾ ಮತ್ತು ಇಸ್ರೇಲ್ ನಡುವಿನ ದಾಳಿ- ಪ್ರತಿದಾಳಿಯಲ್ಲಿ ಇಸ್ರೇಲ್ ಲೆಬೆನಾನ್ ಮೇಲೆ 2006ರ ನಂತರ ನಡೆದ ಅತೀ ದೊಡ್ಡ ದಾಳಿಯಾಗಿದ್ದು, ಹೆಜಾಬುಲ್ಲಾ ರಕ್ಷಣೆಗೆ ಮಾನವ ಗುರಾಣಿ ಆಗಬೇಡಿ. ಈ ರೀತಿ ಹೆಜಾಬುಲ್ಲಾ ರಕ್ಷಣೆ ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಲೆಬೆನಾನ್ ನಿವಾಸಿಗಳಿಗೆ ಕರೆ ನೀಡಿದ್ದಾರೆ. ಈ ಮೂಲಕ ದಾಳಿಯನ್ನು ತೀವ್ರಗೊಳಿಸುವುದಾಗಿ ಸುಳಿವು ನೀಡಿದ್ದಾರೆ.
ಹೆಜಾಬುಲ್ಲಾ ಶಸ್ತ್ರಾಸ್ತ್ರಗಳ ಸಂಗ್ರಹ ಎಂದು ಗುರುತಿಸಿದ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಲೆಬೆನಾನ್ ಮುಗ್ಧ ನಾಗರಿಕರನ್ನು ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ ಎಂದು ಆರೋಪಿಸಿದೆ.
ಇಸ್ರೇಲ್ ನ ಹೈಫಾ, ಅಫುಲಾ, ನಜರೆತ್ ಮುಂತಾದ ನಗರಗಳಲ್ಲಿನ ವಾಯುನೆಲೆ ಮತ್ತು ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಬೆಂಬಲಿತ ಹೆಜಾಬುಲ್ಲಾ ಸಂಘಟನೆ ಹೇಳಿಕೊಂಡಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ 492 ಮಂದಿ ಮೃತಪಟ್ಟಿದ್ದು, 1692ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ 1600 ಗುರಿಗಳನ್ನು ನಿರ್ಧರಿಸಿದ್ದು, ಸತತ ಕ್ಷಿಪಣಿ ದಾಳಿ ನಡೆಸುತ್ತಿದೆ ಎಂದು ವರದಿ ಹೇಳಿದೆ.
ಲೆಬೆನಾನ್ ತೊರೆಯುವಂತೆ ಇಸ್ರೇಲ್ ನಿಂದ 80,000ಕ್ಕೂ ಅಧಿಕ ಕರೆಗಳು ಬಂದಿವೆ. ಈ ಕರೆಗಳು ಬಂದ ಬೆನ್ನಲ್ಲೇ ದಕ್ಷಿಣ ಲೆಬೆನಾನ್ ನಲ್ಲಿರುವ ಹೆಜಾಬುಲ್ಲಾದ ನೆಲೆಗಳು ಎಂದು ಗುರುತಿಸಲಾದ ಕಟ್ಟಡಗಳ ಮೇಲೆ ಇಸ್ರೇಲ್ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿದೆ.
ಒರೆಗೊ, ಇಮಾದ್, ಕ್ರೇಡಿಹ್ ಸೇರಿದಂತೆ ವಿವಿಧ ಕಂಪನಿಗಳಿಂದ 80 ಸಾವಿರಕ್ಕೂ ಅಧಿಕ ಕರೆಗಳು ಲೆಬೆನಾನ್ ನಿವಾಸಿಗಳಿಗೆ ಕರೆ ಬಂದಿದೆ. ಕೂಡಲೇ ಜಾಗ ತೆರವು ಮಾಡಿ ಎಂದು ಸಲಹೆ ನೀಡಿವೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.