ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಸೇರಿದೆ ಎಂಬ ವಿವಾದದ ನಡುವೆಯೂ 4 ದಿನದಲ್ಲಿ 14 ಲಕ್ಷ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಲಡ್ಡು ಮಾರಾಟವಾಗಿ ದಾಖಲೆ ಬರೆದಿದೆ.
ತಿರುಪತಿ ಲಡ್ಡುನಲ್ಲಿ ಕಲಬೆರಕೆ ಆಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಇದರ ನಡುವೆಯೂ ತಿರುಪತಿ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ.
ಪ್ರತಿದಿನ ಸುಮಾರು 60 ಸಾವಿರದಷ್ಟು ತಿರುಪತಿ ಲಡ್ಡುವನ್ನು ಭಕ್ತರು ದೇವಸ್ಥಾನದ ಕೌಂಟರ್ ನಲ್ಲಿ ಖರೀದಿಸುತ್ತಿದ್ದಾರೆ. ಒಟ್ಟಾರೆ ದೇವಸ್ಥಾನದಲ್ಲಿ ಸುಮಾರು 3.50 ಲಕ್ಷ ಲಡ್ಡುಗಳು ಮಾರಾಟವಾಗಿವೆ.
ಸೆಪ್ಟೆಂಬರ್ 19ರಂದು 3.59 ಲಕ್ಷ ಲಡ್ಡು ಮಾರಾಟವಾಗಿದೆ. ಸೆ.20ರಂದು 3.17 ಲಕ್ಷ ಲಡ್ಡು ಮಾರಾಟವಾಗಿದೆ. 21ರಂದು 3.67 ಲಕ್ಷ ಹಾಗೂ 22ರಂದು 3.60 ಲಕ್ಷ ತಿರುಪತಿ ಲಡ್ಡುಗಳು ಮಾರಾಟವಾಗಿವೆ.
ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳದ ಭಕ್ತರು ಆಗಿದ್ದು ಆಗಿ ಹೋಯಿತು ಎಂದು ಪ್ರತಿಕ್ರಿಯಿಸುತ್ತಿದ್ದು, ತಮ್ಮ ಧಾರ್ಮಿಕ ನಂಬಿಕೆ ಅಷ್ಟು ಬಲವಾಗಿದೆ. ಆದ್ದರಿಂದ ತಿರುಪತಿ ಲಡ್ಡು ಹಿಂದಿನಂತೆ ಸಹಜವಾಗಿ ಖರೀದಿಸುತ್ತಿದ್ದಾರೆ ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಗೆ ಪ್ರತಿದಿನ 15 ಸಾವಿರ ಕೆಜಿ ತುಪ್ಪ ಬಳಸಲಾಗುತ್ತಿದ್ದು, ಬೇಳೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ ಬಳಸಲಾಗುತ್ತದೆ.