ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ನಡೆಯುತ್ತಿರುವ ಷಡ್ಯಂತರ ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವುದನ್ನ ವಿರೋಧಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು: ಫೀಡಂಪಾರ್ಕ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಳೆದ 40 ವರ್ಷಗಳಿಂದ ಸಾರ್ವಜನಿಕರ ಸೇವೆಯಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ರಾಜ್ಯಪಾಲರನ್ನು ಬಳಸಿಕೊಂಡು ರಾಜಕೀಯ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಆಡಳಿತ ನಡೆಸುತ್ತಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಮುಡಾ ಪ್ರಕರಣದಲ್ಲಿ ಏನು ಪಾತ್ರವಿಲ್ಲದ ಸಿದ್ದರಾಮಯ್ಯರವರ ವಿರುದ್ದ ಅರೋಪ ಮಾಡಿ, ಕಾಂಗ್ರೆಸ್ ಸರ್ಕಾರ ಉರುಳಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪರ ನಾಡಿನ ಜನರು ನಿಂತಿದ್ದಾರೆ. ಶೋಷಿತರ ಧ್ವನಿಯಾಗಿರುವ ಸಿದ್ದರಾಮಯ್ಯರವರ ವಿರುದ್ದ ಷಡ್ಯಂತ್ರರ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ನಡೆ ವಿರುದ್ದ ನಮ್ಮ ಮೌನ ಪ್ರತಿಭಟನೆ ಎಂದು ಪ್ರತಿಭಟನಾಕರಾರರು ಹೇಳಿದರು.
ಒಕ್ಕೂಟದ ಅಧ್ಯಕ್ಷ ಎಂ.ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಮಾಜಿ ಮಹಾಪೌರರಾದ ವೆಂಕಟೇಶಮೂರ್ತಿ, ಕುರುಬರ ಸಂಘದ ನಿರ್ದೇಶಕರಾದ ರಾಮಕೃಷ್ಣ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಂ.ಶಿವರಾಜು ದಲಿತ ಪರ ಹೋರಾಟಗಾರರು, ಪ್ರಗತಿ ಪರ ಚಿಂತಕರು, ಶೋಷಿತ ಸಮುದಾಯದ ಮುಖಂಡರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.