ಭಾರತ ಮತ್ತು ಬಾಂಗ್ಲಾದೇಶ ನಡುವಣ 2ನೇ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿರುವ ಕಾನ್ಪುರ ಮೈದಾನ ಪ್ರೇಕ್ಷಕರಿಗೆ ಅಪಾಯಕಾರಿಯಾಗಿದ್ದು, ಯಾವುದೇ ಹಂತದಲ್ಲಿ ಬೀಳಬಹುದು ಎಂದು ಸ್ವತಃ ಅಧಿಕಾರಿಗಳೇ ಬಾಯಿಬಿಟ್ಟಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಗೆದ್ದು ಭಾರತ ತಂಡ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದ್ದರೆ, ಬಾಂಗ್ಲಾದೇಶ ಸರಣಿ ಸಮಬಲ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಆದರೆ ಮೈದಾನದ ಸುರಕ್ಷತೆ ಬಗ್ಗೆ ಸಾಕಷ್ಟು ಅನುಮಾನಗಳು ಉಂಟಾಗಿವೆ.
2021ರ ನಂತರ ಇದೇ ಮೊದಲ ಬಾರಿಗೆ ಕಾನ್ಪುರದ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಂದ ಭರ್ತಿ ಆದರೆ ಕುಸಿದು ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೈದಾನದ ರಿಪೇರಿ ಕೆಲಸಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲ್ಕನಿಯ ಎಲ್ಲಾ ಟಿಕೆಟ್ ಗಳನ್ನು ಮಾರಾಟ ಮಾಡದೇ ಇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಬಾಲ್ಕನಿಯಲ್ಲಿ 4800 ಆಸನದ ಪೂರ್ಣ ಸಾಮರ್ಥ್ಯ ಹೊಂದಿದ್ದು, 1700 ಟಿಕೆಟ್ ಮಾತ್ರ ಮಾರಾಟ ಮಾಡಲಿದ್ದಾರೆ.
ಬಾಲ್ಕನಿ 50 ಜನರನ್ನು ಕೂಡ ತಡೆಯುವ ಸಾಮರ್ಥ್ಯ ಇಲ್ಲ. ಒಂದು ವೇಳೆ ರಿಷಭ್ ಪಂತ್ ಸಿಕ್ಸರ್ ಹೊಡೆದು ಅಭಿಮಾನಿಗಳು ಕುಣಿದು ಕುಪ್ಪಳಿಸಿದರೂ ಛಾವಣಿ ಕುಸಿಯಬಹುದು ಎಂದು ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.