ಐಪಿಎಲ್ ಟಿ-20 ಟೂರ್ನಿಯಲ್ಲಿ ಆಡಿದ ಕೆಲವೇ ಪಂದ್ಯಗಳಲ್ಲಿ 156.7 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಸಂಚಲನ ಸೃಷ್ಟಿಸಿದ್ದ ಮಯಾಂಕ್ ಯಾದವ್ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ ನಲ್ಲಿ ಆಡಿದ 2 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದ ಮಯಾಂಕ್ ಯಾದವ್ ನಂತರ ಗಾಯದ ಸಮಸ್ಯೆಯಿಂದ ಕಣಕ್ಕಿಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಈ ವೇಗಿಯನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕಿರುವುದರಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸೂಕ್ತ ತರಬೇತಿ ಕೂಡ ನೀಡಲಾಗುತ್ತಿದೆ.
ಭಾರತದ ಭವಿಷ್ಯದ ಪ್ರಮುಖ ವೇಗಿ ಆಗುವ ಭರವಸೆ ಮೂಡಿಸಿರುವ ಮಯಾಂಕ್ ಮುಂದಿನ ಐಪಿಎಲ್ ನಲ್ಲಿ ಆಡಲಿದ್ದು, ಇದಕ್ಕೆ ಬಾಂಗ್ಲಾದೇಶ ವಿರುದ್ಧದ ಸರಣಿ ಉತ್ತಮವಾಗಲಿದೆ ಎಂದು ಭಾವಿಸಲಾಗಿದೆ.
ಭಾರತ ತಂಡದಲ್ಲಿ ಹಿರಿಯ ಆಟಗಾರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೊಹ್ಲಿ, ರೋಹಿತ್ ನಿವೃತ್ತಿ ನಂತರ ಕೆಎಲ್ ರಾಹುಲ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಸೂರ್ಯಕುಮಾರ್ ನಾಯಕನಾಗಿ ಮುಂದುವರಿಯಲಿದ್ದಾರೆ.
ಅಕ್ಟೋಬರ್ 6ರಂದು ಗ್ವಾಲಿಯರ್ ನಲ್ಲಿ ಮತ್ತು ಅಕ್ಟೋಬರ್ 9ರಂದು ನವದೆಹಲಿಯಲ್ಲಿ ಹಾಗೂ ಅಕ್ಟೋಬರ್ 12ರಂದು ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಟಿ-20 ಪಂದ್ಯಗಳು ನಡೆಯಲಿವೆ.
ಭಾರತ ಟಿ-20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿ.ಕೀ.), ಜಿತೇಶ್ ಶರ್ಮ (ವಿ.ಕೀ.), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತಿಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಶ್ನೋಯಿ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.