ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿ ರಾಸಯನಿಕ ಪದಾರ್ಥಗಳು ಬಳಕೆಯಾಗುತ್ತಿರುವುದು ದಿನಕ್ಕೊಂದು ಮಾದರಿಗಳಲ್ಲಿ ಪತ್ತೆಯಾಗುತ್ತಿದ್ದು, ಇದೀಗ ಕೇಕ್ ಗಳಲ್ಲಿ ಕೂಡ ಕ್ಯಾನ್ಸರ್ ಗೆ ಕಾರಣವಾಗುವ ರಾಸಯನಿಕಗಳು ಪತ್ತೆಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತನಿಖೆ ವೇಳೆ ರಾಜ್ಯದ ಹಲವೆಡೆ ಗೋಬಿ, ಕಬಾಬ್, ಪಾನಿಪುರಿ, ಕಾಟನ್ ಕ್ಯಾಂಡಿ, ತರಕಾರಿ ಹಾಗೂ ಹಣ್ಣುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು, ಇದೀಗ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುವ 12 ಮಾದರಿಯ ಕೇಕ್ ಗಳಲ್ಲಿ ಕೂಡ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಕೇಕ್ ಗೆ ಬಳಸುವ ಪದಾರ್ಥಗಳು ಕಲಬೆರಕೆಯಿಂದ ಕೂಡಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ 12 ಮಾದರಿ ಕೇಕ್ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ.
ಅತೀ ಹೆಚ್ಚು ಬೇಡಿಕೆಯ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣ ಹೆಚ್ಚು ಬಣ್ಣ ಬಳಕೆ ಆಗುತ್ತಿರುವುದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ.
ಕೇಕ್ ಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R, ಕಾರ್ಮಿಯೋಸೆನ್ ಎಂಬ ಕೃತಕ ಬಣ್ಣಗಳ ಅಂಶ ಪತ್ತೆಯಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.