ಟಿ-20 ಕ್ರಿಕೆಟ್ ಮಾದರಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ 9 ವಿಕೆಟ್ ಗೆ 285 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾದೇಶ 52 ರನ್ ಗಳ ಹಿನ್ನಡೆ ಅನುಭವಿಸಿದೆ.
ಕಾನ್ಪುರದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದ ಅಂತ್ಯದ ವೇಳೆಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 285 ರನ್ ಗೆ ಡಿಕ್ಲೇರ್ ಘೋಷಿಸಿತು. ಮೊದಲ ಇನಿಂಗ್ಸ್ ನಲ್ಲಿ 233 ರನ್ ಬಾರಿಸಿದ್ದ ಬಾಂಗ್ಲಾದೇಶ 52 ರನ್ ಹಿನ್ನಡೆ ಅನುಭವಿಸಿದ್ದು, ಪಂದ್ಯದ ಅಂತಿಮ ದಿನವಾದ ನಾಳೆಯ ಆಟ ಕುತೂಹಲ ಮೂಡಿಸಿದೆ.
ಭಾರತದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 72 ರನ್ ಬಾರಿಸಿ ಮಿಂಚಿದರೆ, ಕೆಎಲ್ ರಾಹುಲ್ 62 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 68 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 47 ರನ್ ಗಳಿಸಿದ್ದಾಗ ಔಟಾಗಿ ಅರ್ಧಶತಕದಿಂಧ ವಂಚಿತರಾದರು.
ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಪರ ಮಮಿನುಲ್ ಹಕ್ 194 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 107 ರನ್ ಬಾರಿಸಿ ಶತಕದ ಸಾಧನೆ ಮಾಡಿದರು.