ನಾಯಕ ರೋಹಿತ್ ಶರ್ಮ ಮತ್ತು ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಆಟದಿಂದ ಭಾರತ ತಂಡ ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದಿದ್ದಾರೆ.
ಮಳೆಯಿಂದಾಗಿ ಮೂರು ದಿನಗಳ ಆಟಕ್ಕೆ ಅಡ್ಡಿಯಾಗಿದ್ದು, ನಾಲ್ಕನೇ ದಿನದಾಟದ ವೇಳೆ ಬಾಂಗ್ಲಾದೇಶ ತಂಡವನ್ನು 233 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ದಿನದಾಂತ್ಯಕ್ಕೆ 9 ವಿಕೆಟ್ ಗೆ 285 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಮೊದಲ ಇನಿಂಗ್ಸ್ ನಲ್ಲಿ 52 ರನ್ ಮುನ್ನಡೆ ಪಡೆಯಿತು.
ಭಾರತದ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮ ಸಿಡಿಲಬ್ಬರದ ಆಟದಿಂದ 3 ವಿಶ್ವದಾಖಲೆ ನಿರ್ಮಾಣವಾಗಿದೆ.
ಬೌಂಡರಿ ಮತ್ತು ಸಿಕ್ಸರ್ ಗಳ ಸುರಿಮಳೆ ಸುರಿಸಿದ ರೋಹಿತ್ ಮತ್ತು ಜೈಸ್ವಾಲ್ ಜೋಡಿ ಕೇವಲ 3 ಓವರ್ ಗಳಲ್ಲಿ 50 ರನ್ ಸಿಡಿಸಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಾಗಿವಾಗಿ 50 ರನ್ ಪೂರೈಸಿದ ವಿಶ್ವದಾಖಲೆ ಬರೆದರು. ಇದಕ್ಕೂ ಮುನ್ನ 2024ರಲ್ಲಿಯೇ ನಾಟಿಂಗ್ ಹ್ಯಾಮ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 4.2 ಓವರ್ ಗಳಲ್ಲಿ 50 ರನ್ ಪೂರೈಸಿದ ದಾಖಲೆ ಬರೆದಿತ್ತು.
ನಂತರ ಭಾರತ 10.1 ಓವರ್ ಗಳಲ್ಲಿ ಅಂದರೆ 61 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಭಾರತ ಅತ್ಯಂತ ವೇಗವಾಗಿ ಮೂರಂಕಿ ದಾಟಿದ ವಿಶ್ವದಾಖಲೆ ಬರೆಯಿತು. ಇದಕ್ಕೂ ಮುನ್ನ ಭಾರತ 2023ರಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12.2 ಓವರ್ ಗಳಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡಿತು.
50 ನಂತರ ಮತ್ತು 100 ರನ್ ವಿಶ್ವದಾಖಲೆ ನಂತರ ಭಾರತ ತಂಡ 150 ರನ್ ಪೂರೈಸಿ ಮೂರನೇ ವಿಶ್ವದಾಖಲೆ ಬರೆಯಿತು. 18.2 ಓವರ್ ಗಳಲ್ಲಿ ಭಾರತ 150 ರನ್ ಗಡಿ ದಾಟುವ ಮೂಲಕ 2023ರಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 21.1 ಓವರ್ ಗಳಲ್ಲಿ ನಿರ್ಮಿಸಿದ್ದ ತನ್ನದೇ ವಿಶ್ವದಾಖಲೆಯನ್ನು ಉತ್ತಮಪಡಿಸಿಕೊಂಡಿತು.