ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಫೋನ್ ಡೆಲಿವರಿ ಮಾಡಲು ಬಂದಿದ್ದ ಡೆಲಿವರಿ ಬಾಯ್ ನನ್ನು ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಐಫೋನ್ ಆರ್ಡರ್ ಮಾಡಿದ್ದ ದುಷ್ಕರ್ಮಿಗಳು 1.5 ಲಕ್ಷ ರೂ. ದರವನ್ನು ನಗದು ರೂಪದಲ್ಲಿ ನೀಡುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದರು. ಐಫೋನ್ ಪಡೆದ ದುಷ್ಕರ್ಮಿಗಳು ಹಣ ನೀಡದೇ ಡೆಲಿವರಿ ಬಾಯ್ ನನ್ನು ಹತ್ಯೆ ಮಾಡಿದ್ದಾರೆ.
ನಿಶಾಂತ್ ಘಂಜ್ ನಿವಾಸಿ 30 ವರ್ಷದ ಭರತ್ ಸಾನು ಸೆಪ್ಟೆಂಬರ್ 23ರಂದು ಐಫೋನ್ ಡೆಲಿವರಿ ಮಾಡಲು ನಿಗದಿತ ಸ್ಥಳಕ್ಕೆ ಹೋದಾಗ ಗಜಾನನ್ ಮತ್ತು ಆತನ ಸ್ನೇಹಿತ ಕೊಂದು ಮೃತದೇಹವನ್ನು ಇಂದಿರಾ ಚಾನೆಲ್ ನಲ್ಲಿ ಎಸೆದಿದ್ದರು.
ಭರತ್ ಸಾನು ಎರಡು ದಿನ ಕಳೆದರೂ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಚಿನ್ಹಾತ್ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಭರತ್ ಫೋನ್ ಕಾಲ್ ಡಿಟೈಲ್ಸ್ ಮತ್ತು ಲೋಕೆಷನ್ ಜಾಡು ಹಿಡಿದು ಪೊಲೀಸರು ಹೋದಾಗ ಗಜಾನನ ನಂಬರ್ ಪತ್ತೆಯಾಗಿದೆ. ಅಲ್ಲದೇ ಆತನ ಸ್ನೇಹಿತ ಆಕಾಶ್ ಕೂಡ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಆಕಾಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.