ಮಳೆಯ ಅಡ್ಡಿಯ ನಡುವೆಯೂ ಟೆಸ್ಟ್ ಕ್ರಿಕೆಟ್ ಅನ್ನು ಟಿ-20 ಮಾದರಿಯಲ್ಲಿ ಆಡಿದ ಭಾರತ ತಂಡ 7 ವಿಕೆಟ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.
ಕಾನ್ಪುರದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಮಂಗಳವಾರ ಬಾಂಗ್ಲಾದೇಶ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ 146 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಮೊದಲ ಇನಿಂಗ್ಸ್ ಮುನ್ನಡೆಯಿಂದ ಗೆಲ್ಲಲು 95 ರನ್ ಗುರಿ ಪಡೆದಿತ್ತು. ಸುಲಭ ಗುರಿ ಬೆಂಬತ್ತಿದ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
2 ವಿಕೆಟ್ ಗೆ 26 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ 146 ರನ್ ಗೆ ಭೋಜನ ವಿರಾಮಕ್ಕೂ ಮುನ್ನವೇ ಪತನಗೊಂಡಿತು. ಜಡೇಜಾ, ಅಶ್ವಿನ್ ಮತ್ತು ಬುಮ್ರಾ ತಲಾ 3 ವಿಕೆಟ್ ಪಡೆದು ಬಾಂಗ್ಲಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.
ಮೊದಲ ಇನಿಂಗ್ಸ್ ನಲ್ಲಿ 52 ರನ್ ಗಳ ಮುನ್ನಡೆ ಪಡೆದಿದ್ದ ಭಾರತ ಸುಲಭ ಗೆಲುವು ದಾಖಲಿಸಿತು. ಮೊದಲ ಇನಿಂಗ್ಸ್ ನಲ್ಲಿ 72 ರನ್ ಗಳಿಸಿದ್ದ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಎರಡನೇ ಇನಿಂಗ್ಸ್ ನಲ್ಲೂ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ನಾಯಕ ರೋಹಿತ್ ಶರ್ಮ (8), ಶುಭಮನ್ ಗಿಲ್ (6) ಅಲ್ಪ ಮೊತ್ತಕ್ಕೆ ಔಟಾದ ನಂತರ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ 58 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಜೈಸ್ವಾಲ್ 45 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 51 ರನ್ ಗಳಿಸಿದ್ದು ಸಿಕ್ಸರ್ ಮೂಲಕ ಗೆಲುವಿನ ರನ್ ಬಾರಿಸಲು ಹೋಗಿ ಔಟಾದರೆ, ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 29 ರನ್ ಬಾರಿಸಿ ಔಟಾಗದೇ ಉಳಿದರು.