Friday, November 22, 2024
Google search engine
Homeತಾಜಾ ಸುದ್ದಿಗಾಂಧಿ ಬಗ್ಗೆ ಸುಳ್ಳು ಪ್ರಚಾರ ಮಾಡಿ ಗೋಡ್ಸೆಯಂಥ ದುಷ್ಟರನ್ನು ಸೋಲಿಸಬೇಕಿದೆ: ಸಿಎಂ ಸಿದ್ದರಾಮಯ್ಯ

ಗಾಂಧಿ ಬಗ್ಗೆ ಸುಳ್ಳು ಪ್ರಚಾರ ಮಾಡಿ ಗೋಡ್ಸೆಯಂಥ ದುಷ್ಟರನ್ನು ಸೋಲಿಸಬೇಕಿದೆ: ಸಿಎಂ ಸಿದ್ದರಾಮಯ್ಯ

ಗಂಡ ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮನಾ? ಗಾಂಧಿಯ ಬಗ್ಗೆ ಸುಳ್ಳು ಪ್ರಚಾರ ಮಾಡಿ ಗೋಡ್ಸೆಯಂಥಾ ಖಳನಾಯಕರನ್ನು ಸೋಲಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ‌ ಇಲಾಖೆ ವಾರ್ತಾ ಸೌಧದಲ್ಲಿ ಮಂಗಳವಾರ ನಡೆದ ಗಾಂಧಿ ಜಯಂತಿ, ಟೀಯೆಸ್ಸಾರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

ಈಗ ಊಹಾ ಪತ್ರಿಕೋದ್ಯಮದ ಪಿಡುಗು ಹೆಚ್ಚಾಗಿದೆ. ಈ ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಬೇಕಾ? “ಅವರು ಹಿಂಗೆ ಹೇಳಿದ್ರು, ನೀವೇನು ಹೇಳ್ತೀರಾ? ಅಂತ ಮುಖಕ್ಕೆ ಮೈ ಹಿಡಿಯೋದೇ ಇವತ್ತಿನ ಪತ್ರಿಕೋದ್ಯಮ ಆಗಿಬಿಟ್ಟಿದೆ. ಇದು ಯಾವ ರೀತಿ ಪತ್ರಿಕೋದ್ಯಮ‌ ನನಗಂತೂ ಅರ್ಥ ಆಗ್ತಾ ಇಲ್ಲ ಎಂದರು.

ಹಿಂದೆಲ್ಲಾ ಪತ್ರಕರ್ತರಿಗೆ ತುಂಬಾ ಘನತೆ ಗೌರವ ಇತ್ತು. ಈಗ ಇದೆಯಾ ಗೊತ್ತಿಲ್ಲ. ಈ ಬಗ್ಗೆ ವಿಶ್ಲೇಷಣೆ ಮಾಡಿದರೆ ಅದನ್ನೇ ದೊಡ್ಡ ವಿವಾದ ಮಾಡಿಬಿಡ್ತಾರೆ. ಹೀಗಾಗಿ ಈ ಊಹಾ ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನೂ ಹೇಳಲ್ಲ. ಗೋಡ್ಸೆಗಳನ್ನು ನಾವು ಸಹಿಸಬಾರದು. ಗಾಂಧಿಯ ಬಗ್ಗೆ ಸುಳ್ಳು ಪ್ರಚಾರ ಮಾಡಿ ಗೋಡ್ಸೆಯಂಥಾ ಖಳನಾಯಕರನ್ನು ಪೂಜಿಸುವ ದುಷ್ಟ ಶಕ್ತಿಗಳನ್ನು ನಾವು ಸೋಲಿಸಬೇಕಿದೆ ಎಂದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆದ ಬಳಿಕ 2014 ರಲ್ಲಿ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಆರಂಭಿಸಿದೆ. ಗಾಂಧಿ ತತ್ವಗಳನ್ನು ಅನುಸರಿಸುತ್ತಾ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ಕಲಿಸುತ್ತಿರುವ ಅತ್ಯಂತ ಅರ್ಹರು ಈ ಬಾರಿಯ ಗಾಂಧಿ ಸೇವಾ ಪ್ರಶಸ್ತಿ ಪಡೆದಿದ್ದಾರೆ ಎಂದು ಶ್ಲಾಘಿಸಿದರು.

ಶಿಕ್ಷಣ ಪಡೆದವರೆಲ್ಲಾ ಮಾನವೀಯತೆ ಇರುವವರು ಎಂದು ಹೇಳಲಾಗುವುದಿಲ್ಲ. ಶಿಕ್ಷಣ ಮನುಷ್ಯರನ್ನು ಮಾನವೀಯಗೊಳಿಸಬೇಕು. ಇಲ್ಲದಿದ್ದರೆ ಅಂತಹ ಶಿಕ್ಷಣಕ್ಕೆ ಮೌಲ್ಯ ಇರುವುದಿಲ್ಲ. ಶಿಕ್ಷಣ ಪಡೆದವರು ಸಮಾಜದ ಆಸ್ತಿ ಆಗಬೇಕು. ಸಮಾಜದ ವಿರೋಧಿ ಆಗಬಾರದು. ಗಾಂಧೀಜಿ ಅವರ ಬದುಕೇ ಸಂದೇಶವಾಗಿತ್ತು. ಸಮಾಜದ ಬದಲಾವಣೆಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಹೀಗಾಗಿ ಇವರ ವಿಚಾರಗಳು ಎಂದೆಂದಿಗೂ ಶಾಶ್ವತ ಎಂದರು.

ಗಾಂಧಿಯವರನ್ನು ದೈಹಿಕವಾಗಿ ಕೊಲ್ಲಬಹುದು. ಆದರೆ ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಗೋಡ್ಸೆ ಭಾರತವನ್ನು ನಿರ್ಮಿಸಲು ಹೊರಟಿರುವವರನ್ನು ಸೋಲಿಸಬೇಕು. ನಾವು ಗಾಂಧಿ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಟೀಯೆಸ್ಸಾರ್ ಮತ್ತು ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರು ಇವತ್ತಿನ ಪತ್ರಕರ್ತರಿಗೆ ಮಾದರಿ ಆಗಬೇಕು ಎಂದು ಸಲಹೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ತ್ರಿಲೋಕಚಂದ್ರ, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಕಂಠೀರವ ಸ್ಟುಡಿಯೊ ಅಧ್ಯಕ್ಷ ಅಯೂಬ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments