ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮೂವರು ಸದಸ್ಯರ ಪಾಕಿಸ್ತಾನ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ನಗರದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಗುಪ್ತಚರ ಮಾಹಿತಿ ಆಧರಿಸಿ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪೊಲೀಸರು ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಇತ್ತೀಚೆಗೆ ದಾವಣೆಗೆಯಲ್ಲಿ 5 ಮಂದಿಯನ್ನು ಬಂಧಿಸಲಾಗಿದ್ದು, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕೂಡ ಪಾಕಿಸ್ತಾನಿ ಪ್ರಜೆಗಳು ಇರುವ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮುಂದುವರಿದಿದೆ.
ಬೆಂಗಳೂರಿನ ಪೀಣ್ಯದಲ್ಲಿ ವಾಸವಿದ್ದ ಪತಿ, ಪತ್ನಿ ಹಾಗೂ ಪುತ್ರಿಯನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ತಾನದಿಂದ 15ಕ್ಕೂ ಹೆಚ್ಚು ಜನ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿರುವುದು ಗೊತ್ತಾಗಿದೆ. ಇವರೆಲ್ಲಾ ಮೆಹದಿ ಫೌಂಡೇಷನ್ ಸೇರಿದ್ದರು. ಇವರೆಲ್ಲ ಯೂನಸ್ ಅಲ್ಗೋರ್ ಧರ್ಮ ಗುರುಗಳ ಪರ ಪ್ರಚಾರಕ್ಕಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.
ಷೀದ್ ಅಲಿ ಸಿದ್ದಿಕಿ ಕುಟುಂಬದ ಜೊತೆ ಭಾರತಕ್ಕೆ ನುಸುಳಿದವರಲ್ಲಿ ಏಳು ಮಂದಿ ಬೆಂಗಳೂರಿಗೆ ಬಂದಿದ್ದರೆ ಉಳಿದವರು ಅಸ್ಸಾಂ, ಒರಿಸ್ಸಾ ಮತ್ತು ಹೈದರಾಬಾದ್ ಕಡೆ ತೆರಳಿದ್ದರು.
ಜಿಗಣಿಯಲ್ಲಿ ರಷೀದ್ ಕುಟುಂಬ ಅರೆಸ್ಟ್ ಆಗುತ್ತಿದ್ದಂತೆಯೇ ಮತ್ತಷ್ಟು ಮಾಹಿತಿ ಹೊರಬರಲಾರಂಭವಾಗಿದೆ. ಈತ ನೀಡಿದ ಮಾಹಿತಿ ಆಧರಿಸಿಯೇ ದಾವಣೆಗೆಯಲ್ಲಿ 5 ಮಂದಿಯನ್ನು ಬಂಧಿಸಲಾಗಿತ್ತು.
ಮುಂದಿನ ದಿನಗಳಲ್ಲಿ ಮತ್ತಷ್ಟು ಪಾಕ್ ಪ್ರಜೆಗಳು ಬಂಧನವಾಗುವ ಸಾಧ್ಯತೆ ಇದೆ. ಬಂಧಿತ ಮೂವರು ಪಾಕ್ ಪ್ರಜೆಗಳಿಗೆ ಸದ್ಯ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.