ನಾನು 50 ಕೋಟಿ ಕೇಳಿದ್ದಾರೆ ಅಂತ ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ ಪ್ರತಿಯಾಗಿ ನನ್ನ ವಿರುದ್ಧ 100 ಕೋಟಿ ರೂ. ಕೇಳಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರು ನೀಡಿದ್ದಾರೆ ಎಂದು ಖಾಸಗಿ ಟಿವಿ ಚಾನೆಲ್ ಮುಖ್ಯಸ್ಥ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರ ಬಳಿ 100 ಕೋಟಿ ಕೇಳುವುದಕ್ಕೆ ಆಗುತ್ತಾ? ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹೀಗೆ ದೂರು ಕೊಟ್ಟರೆ ಯಾರಾದರೂ ನಂಬುತ್ತಾರಾ? ಜನರು ನಂಬುವುತಾದರೂ ಹೇಳಬೇಕಲ್ವಾ ಎಂದು ಪ್ರಶ್ನಿಸಿದರು.
ನಾನು 2019ರಿಂದ ಜೆಡಿಎಸ್ ಪಕ್ಷದಲ್ಲಿದ್ದೇನೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮನೆ ಮನೆಗೆ ಹೋಗಿ ಮತ ಕೇಳಿದ್ದೇನೆ. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದಿದ್ದೇನೆ. ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ನಾನು 50 ಕೋಟಿ ಕೇಳಿದಾಗ ದೊಡ್ಡ ಧ್ವನಿಯಲ್ಲಿ ಆಗಲ್ಲ ಎಂದು ಹೇಳಿದ್ದಕ್ಕೆ ನನ್ನ ಮೇಲೆ ಸಿಟ್ಟಾಗಿದ್ದಾರೆ ಎಂದು ಅವರು ಹೇಳಿದರು.
ನಾಯಿ, ನರಿಗಳಿಗೆಲ್ಲಾ ನಾನು ಉತ್ತರ ಕೊಡಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯ್ ತಾತಾ, ಅವರೇ ನನ್ನ ಹೆಸರನ್ನು ಮೊದಲು ಪ್ರಸ್ತಾಪಿಸಿದ್ದು. ನನ್ನ ನೆನಪು ಇದೆ ಎಂದು ಅರ್ಥವಾಯಿತಲ್ಲಾ? ಇಷ್ಟು ದಿನ ನನ್ನ ಗುರುತಿಸದೇ ಇದ್ದವರು ಈಗ ಗುರುತಿಸಿದ್ದಕ್ಕೆ ಖುಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪಕ್ಷವನ್ನು ಕಟ್ಟಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನನಗೆ ಹೆಮ್ಮೆ ಇದೆ. ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡುವ ಬದಲು ಪಕ್ಷವನ್ನು ಕಟ್ಟಲಿ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸಲಿ. ಅದು ಬಿಟ್ಟು ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ. ನಾನು ಪೊಲೀಸರಿಗೆ ದೂರು ನೀಡುವಾಗ ಸಾಕ್ಷಿಯಾಗಿ ಸಾಕಷ್ಟು ಫೋಟೊಗಳನ್ನು ಕೊಟ್ಟಿದ್ದೇನೆ. ಅವರ ಬಳಿ ಏನಿದೆ ಸಾಕ್ಷ್ಯ ಎಂದು ನನ್ನ ಮೇಲೆ ದೂರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಅವರು ನುಡಿದರು.