ಸಿಲಿಕಾನ್ ಸಿಟಿಯಲ್ಲಿ ಶನಿವಾರ ಸಂಜೆ ಆರಂಭವಾದ ಮಳೆ ತಡರಾತ್ರಿಯಾದರೂ ಸುರಿಯುತ್ತಿದ್ದು, ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವೀಕೆಂಡ್ ಆಗಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಿದ್ದಾರೆ.
ಶನಿವಾರ ರಾತ್ರಿ ಸುರಿದ ಮಳೆಯಿಂದ 49 ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, 3 ಕಡೆ 100 ಮಿಲಿ ಮೀಟರ್ ಗೂ ಮಳೆಯಾಗಿದೆ. ರಾತ್ರಿ 9:45 ಗಂಟೆ ಬಳಿಕ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದ್ದು ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸದ ಗುಂಗಿನಲ್ಲಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ತತ್ತರಿಸುವಂತಾಗಿದೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ 109.50 ಮಿಮೀ, ನಾಗಪುರದಲ್ಲಿ 104 ಮಿಮೀ ಹಾಗೂ ಹಂಪಿನಗರದಲ್ಲಿ 102 ಮಿ.ಮೀ. ಮಳೆಯಾಗಿದ್ದು, ಬಿನ್ನಿಪೇಟೆಯಲ್ಲಿ ಕಾಂಪೌಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. 45 ಮನೆಗಳಿಗೆ ನೀರು ನುಗ್ಗಿದೆ. ಕಾಂಪೌಡ್ ಕುಸಿತ ಪರಿಣಾಮ 16 ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ.
ಕೆ.ಆರ್ ಮಾರುಕಟ್ಟೆಯ ರಸ್ತೆಯಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಜನರು ಕಂಗಾಲಾಗಿದ್ದಾರೆ. ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು.