ಬೆಂಗಳೂರಿನಲ್ಲಿ ಬಂಧಿಸಿದ್ದ ಪಾಕಿಸ್ತಾನಿ ಪ್ರಜೆಗಳ ಸುಳಿವಿನ ಮೇರೆಗೆ ಬೆಂಗಳೂರು ಪೊಲೀಸರು ದೇಶಾದ್ಯಂತ ಅಡಗಿದ್ದ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ನಂತರ ದಾವಣೆಗೆರೆಯಲ್ಲಿ 5 ಮಂದಿಯನ್ನು ಬಂಧಿಸಿದ್ದರು. ಬಂಧಿತರು ನೀಡಿದ ಸುಳಿವು ಆಧರಿಸಿ ವಿವಿದೆಡೆ ನೆಲೆಸಿದ್ದ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇದರಿಂದ ದೇಶದಲ್ಲಿ ಅಡಗಿದ್ದ ಪಾಕಿಸ್ತಾನಿ ಪ್ರಜೆಗಳ ಜಾಲ ಮತ್ತಷ್ಟು ವಿಸ್ತರಿಸಿರುವ ಆತಂಕ ವ್ಯಕ್ತವಾಗಿದೆ.
ಭಾರತದಲ್ಲಿ ಪಾಕಿಸ್ತಾನಿ ಪ್ರಜೆಗಳು ನೆಲೆಸಲು ಯೋಜನೆ ಮಾಡುತ್ತಿದ್ದ ಪ್ರಕರಣದ ಕಿಂಗ್ ಪಿನ್ ಪರ್ವೇಜ್ ಬಂಧನದಿಂದ ಮತ್ತಷ್ಟು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸುವ ಸಾಧ್ಯತೆ ಇದೆ. ಈಗಾಗಲೇ ಚೆನ್ನೈ, ದೆಹಲಿ, ಹೈದರಾಬಾದ್ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿದೆ.
ಕಳೆದ ಮೂರು ವರ್ಷಗಳಿಂದ ಪೀಣ್ಯದ ಆಂಧ್ರಹಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನೆಲೆಸಿದ್ದ ದಂಪತಿ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಸೈಯದ್, ಆತನ ಪತ್ನಿ ಹಾಗೂ ಮಗಳು ಹಿಂದೂಗಳ ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು.
ಯೂಟ್ಯೂಬ್ನಲ್ಲಿ ಧರ್ಮ ಪ್ರಚಾರ 2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಅಂದಿನಿಂದ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.