ಇಂಗ್ಲೆಂಡ್ ನ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಜೋಡಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 454 ರನ್ ಜೊತೆಯಾಟ ನಿಭಾಯಿಸಿ ವಿಶ್ವದಾಖಲೆ ಬರೆದಿದ್ದಾರೆ.
ಮುಲ್ತಾನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ಗುರುವಾರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 454 ರನ್ ಪೇರಿಸಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಜೊತೆಯಾಟದ ವಿಶ್ವದಾಖಲೆ ಬರೆದಿದ್ದಾರೆ.
1877ರಲ್ಲಿ ಕ್ರಿಕೆಟ್ ಆರಂಭವಾದ ನಂತರ ಇದೇ ಮೊದಲ ಬಾರಿಗೆ 450ಕ್ಕಿಂತ ಹೆಚ್ಚು ಮೊತ್ತದ ಜೊತೆಯಾಟದ ದಾಖಲಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಆಡಂ ವೋಗ್ಸ್ ಮತ್ತು ಶಾನ್ ಮಾರ್ಷ್ ಜೋಡಿ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4ನೇ ವಿಕೆಟ್ ಗೆ 449 ರನ್ ಪೇರಿಸಿದ್ದು ಇದುವರೆಗಿನ ದಾಖಲೆ ಜೊತೆಯಾಟವಾಗಿತ್ತು. ಅಲ್ಲದೇ 1934ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ 451 ರನ್ ಜೊತೆಯಾಟವಾಗಿತ್ತು.
ಯಾವುದೇ ವಿಕೆಟ್ ಗೆ ಅತೀ ದೊಡ್ಡ ದಾಖಲೆ ಜೊತೆಯಾಟ ದಾಖಲಾಗಿರುವುದು ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ದನೆ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 624 ರನ್ ಜೊತೆಯಾಟವಾಗಿದೆ.
1997ರಲ್ಲಿ ಭಾರತ ವಿರುದ್ಧ ಕುಮಾರ ಸಂಗಕ್ಕಾರ ಮತ್ತು ಜಯಸೂರ್ಯ 577 ರನ್ ಜೊತೆಯಾಟ ನಿಭಾಯಿಸಿರುವುದು ಎರಡನೇ ಅತೀ ದೊಡ್ಡ 2ನೇ ಜೊತೆಯಾಟವಾಗಿದೆ.
ಜೋ ರೂಟ್ 375 ಎಸೆತಗಳಲ್ಲಿ 17 ಬೌಂಡರಿ ಸಹಿತ 262 ರನ್ ಬಾರಿಸಿ ಔಟಾದರೆ, ಬ್ರೂಕ್ 322 ಎಸೆತಗಳಲ್ಲಿ 29 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 317 ರನ್ ಸಿಡಿಸಿ ತ್ರಿಶತಕದ ಗೌರವಕ್ಕೆ ಪಾತ್ರರಾದರು. ಇವರಿಬ್ಬರ ಜೊತೆಯಾಟದಿಂದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಗೆ 823 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಇನಿಂಗ್ಸ್ ನಲ್ಲಿ 556 ರನ್ ಗಳ ಬೃಹತ್ ಮೊತ್ತ ದಾಖಲಿಸಿದ್ದ ಪಾಕಿಸ್ತಾನ ಎರಡನೇ ಇನಿಂಗ್ಸ್ ನಲ್ಲಿ 152 ರನ್ ಗೆ 6 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿದ್ದು ಪಾಕಿಸ್ತಾನ ಉಳಿದ 4 ವಿಕೆಟ್ ಕಾಯ್ದುಕೊಳ್ಳಬೇಕಿದೆ. ಮುನ್ನಡೆ ಪಡೆಯಬೇಕಾದರೆ ಇನ್ನೂ 106 ರನ್ ಗಳಿಸಬೇಕಾಗಿದೆ.