ಬಿಜೆಪಿ ಭಯೋತ್ಪಾದಕರ ಪಕ್ಷ ಎಂದು ಕರೆಯುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷ ನಗರ ನಕ್ಸಲ್ ಪಾರ್ಟಿ ಎಂಬ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ ಮಹಾರಾಷ್ಟ್ರದ ವಿದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಅರ್ಬನ್ ನಕ್ಸಲ್ ಪಾರ್ಟಿಯಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ದಾರಿ ಹಿಡಿದಿದೆ ಎಂದು ಆರೋಪಿಸಿದ್ದರು.
ಪ್ರಧಾನಿ ಮೋದಿ ಅವರ ಆರೋಪವನ್ನು ಸಾರಾ ಸಗಟಾಗಿ ತಿರಸ್ಕರಿಸಿದ ಮಲ್ಲಿಕಾರ್ಜುನ ಖರ್ಗೆ, ಹರಿಯಾಣದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿಯೇ ಅರ್ಬನ್ ನಕ್ಸಲ್ ಚಟುವಟಿಕೆ ನಡೆಸಿದೆ. ಗುಂಪು ಹಲ್ಲೆ ನಡೆಸುವ ಬಿಜೆಪಿಯೇ ಭಯೋತ್ಪಾದಕರ ಪಕ್ಷವಾಗಿದೆ ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷಗಳು ಒಂದಾದರೆ ದೇಶವನ್ನು ಒಡೆಯುವ ಪ್ರಯತ್ನ ವಿಫಲವಾಗಲಿದೆ ಎಂಬುದು ಬಿಜೆಪಿಗೆ ಗೊತ್ತಿದೆ. ಜನರಿಗೆ ಕಾಂಗ್ರೆಸ್ ಪಕ್ಷ ಎಷ್ಟು ಹತ್ತಿರವಾಗಿದೆ ಎಂಬುದು ಇತ್ತೀಚಿನ ಚುನಾವಣೆಗಳಲ್ಲಿ ಗೊತ್ತಾಗಿದೆ ಎಂದು ಖರ್ಗೆ ಹೇಳಿದರು.