ಆರಂಭಿಕ ಸಂಜು ಸ್ಯಾಮ್ಸನ್ ಚೊಚ್ಚಲ ಶತಕ ಹಾಗೂ ನಾಯಕ ಸೂರ್ಯಕುಮಾರ್ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ರನ್ ಹೊಳೆ ಹರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಹೈದರಾಬಾದ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 297 ರನ್ ಪೇರಿಸಿತು. ಇದು ಟಿ-20 ಕ್ರಿಕೆಟ್ ನಲ್ಲಿ 2ನೇ ಅತಿ ದೊಡ್ಡ ಮೊತ್ತವಾಗಿದ್ದು, ಟೆಸ್ಟ್ ಆಡುವ ತಂಡದಿಂದ ಬಂದ ಅತೀ ದೊಡ್ಡ ಮೊತ್ತವಾಗಿದೆ.
ಬಾಂಗ್ಲಾದೇಶ ಆಟಗಾರರ ಕಳಪೆ ಫೀಲ್ಡಿಂಗ್ ಲಾಭ ಪಡೆದ ಭಾರತ ತಂಡದ ಆಟಗಾರರು ಹಲವು ಜೀವದಾನಗಳ ನೆರವಿನಿಂದ ರನ್ ಹೊಳೆ ಹರಿಸಿದರು. ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸೇರಿದ 111 ರನ್ ಬಾರಿಸಿ ಚೊಚ್ಚಲ ಶತಕ ಗಳಿಸಿದರು.
ನಾಯಕ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 75 ರನ್ ಸಿಡಿಸಿ ಅರ್ಧಶತಕ ಗಳಿಸಿದರು. ಸ್ಯಾಮ್ಸನ್ ಮತ್ತು ಸೂರ್ಯ ಕುಮಾರ್ 2ನೇ ವಿಕೆಟ್ ಗೆ 173 ರನ್ ಜೊತೆಯಾಟ ನಿಭಾಯಿಸಿದರು.
ರಿಯಾನ್ ಪರಾಗ್ (34) ಮತ್ತು ಹಾರ್ದಿಕ್ ಪಾಂಡ್ಯ (47) 4ನೇ ವಿಕೆಟ್ ಗೆ 70 ರನ್ ಜೊತೆಯಾಟದಿಂದ ತಂಡ 300ರ ಗಡಿ ತಲುಪುವ ಭರವಸೆ ಮೂಡಿಸಿದರು. ಆದರೆ ಈ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ರಿಂಕು ಸಿಂಗ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ 300ರ ಗಡಿ ಸಮೀಪ ಕೊಂಡೊಯ್ದರು.
ಭಾರತ ತಂಡ ಟಿ-20 ದಾಖಲೆಗಳು
297/6- ಯಾವುದೇ ತಂಡದ ಎದುರು ಭಾರತದ ಅತ್ಯಧಿಕ ಮೊತ್ತ
297/6 ಟಿ-20- ಕ್ರಿಕೆಟ್ ಇತಿಹಾಸದಲ್ಲೇ 2ನೇ ಅತೀ ದೊಡ್ಡ ಮೊತ್ತ
297/6 ಟೆಸ್ಟ್- ಆಡುವ ತಂಡದ ಅತೀ ದೊಡ್ಡ ಮೊತ್ತ
82 ಪವರ್- ಪ್ಲೇನಲ್ಲಿ ಯಾವುದೇ ತಂಡ ಗಳಿಸಿದ ಅತ್ಯಧಿಕ ಮೊತ್ತ
7.2 ಓವರ್- ಅತ್ಯಂತ ವೇಗವಾಗಿ 100 ರನ್ ಬಾರಿಸಿ ತಂಡ
13.6 ಓವರ್- ಅತ್ಯಂತ ವೇಗವಾಗಿ 200 ಪೂರೈಸಿದ ತಂಡ
22 ಸಿಕ್ಸರ್- ಟಿ-20 ಕ್ರಿಕೆಟ್ ನಲ್ಲಿ ಬಂದ ಅತೀ ಹೆಚ್ಚು ಸಿಕ್ಸರ್
25 ಬೌಂಡರಿ- ಭಾರತ ತಂಡ ಯಾವುದೇ ತಂಡದ ವಿರುದ್ಧ ಬಂದ ಬೌಂಡರಿ