ರಾಜಕೀಯ ಮುನಿಸು ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ 6 ವರ್ಷಗಳ ನಂತರ ಒಂದಾಗಿದ್ದಾರೆ.
ಚಾಮರಾಜನಗರದಲ್ಲಿ ಶನಿವಾರ ಶ್ರೀನಿವಾಸ್ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಸ್ವತಃ ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಮನವೊಲಿಸಿದ್ದಾರೆ. ಈ ಮೂಲಕ 6 ವರ್ಷಗಳ ನಂತರ ಸ್ನೇಹಿತರು ಒಂದಾಗಿದ್ದಾರೆ.
ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ವೇಳೆ ಶ್ರೀನಿವಾಸ್ ಪ್ರಸಾದ್ ಮಲಗಿದ್ದರು. ಆದರೂ ಸಿದ್ದರಾಮಯ್ಯ ಕಾದು ಕುಳಿತರು. ನಂತರ ಬಂದ ಶ್ರೀನಿವಾಸ್ ಪ್ರಸಾದ್ ಹೂವಿನ ಬೊಕ್ಕೆ ನೀಡಿ ಸ್ವಾಗತಿಸಿದರು.
ಏನ್ರಿ ಪ್ರಸಾದ್ ಮಲಗಿದ್ದರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ಕಾಲು ನೋವು ಇತ್ತು. ಹಾಗಾಗಿ ಮಲಗಿದ್ದೆ ಎಂದು ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದರಿಂದ ಅಸಮಾಧಾನಗೊಂಡಿದ್ದ ಶ್ರೀನಿವಾಸ್ ಪ್ರಸಾದ್, ಬಿಜೆಪಿಗೆ ಸೇರಿಕೊಂಡಿದ್ದರು. ಅಲ್ಲದೇ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದು ತೋರಿಸ್ತಿನಿ ಎಂದು ಸವಾಲು ಹಾಕಿದ್ದರು.
ಇತ್ತೀಚೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಲೋಕಸಭಾ ಅಭ್ಯರ್ಥಿ ಎಂ. ಲಕ್ಷ್ಮಣ್ ಭೇಟಿ ನೀಡಿ ಮಾತುಕತೆ ನಡೆಸಿದ್ದೂ ಅಲ್ಲದೇ ರಾಜೀ ಸಂದಾನಕ್ಕೆ ಮುಂದಾಗಿದ್ದರು. ಇದೀಗ ಇಬ್ಬರು ಸ್ನೇಹಿತರು ರಾಜಕೀಯ ದ್ವೇಷ ಮರೆತು ಒಂದಾಗಿದ್ದಾರೆ. ಇದರಿಂದ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.