ಬ್ಯಾಂಕ್ ಸಾಲ ಸಂಪೂರ್ಣವಾಗಿ ಭರ್ತಿ ಮಾಡಿ ಮನೆ ಉಳಿಸಿಕೊಡುವ ಮೂಲಕ ಬೀದಿಪಾಲಾಗುತ್ತಿದ್ದ ಕುಟುಂಬವನ್ನು ರಕ್ಷಿಸಿದ ಲುಲು ಗ್ರೂಪ್ ಮಾಲೀಕ ಹಾಗೂ ಶತಕೋಟ್ಯಾಧಿಪತಿ ಉದ್ಯಮಿ ಮೊಹಮದ್ ಯೂಸುಫ್ ಅಲಿ ಮಾನವೀಯತೆ ಮೆರೆದಿದ್ದಾರೆ.
ಕೇರಳದ ಇಬ್ಬರು ಮಕ್ಕಳ ತಾಯಿಯನ್ನು ಬ್ಯಾಂಕ್ ಸಾಲ ತೀರಿಸದ ಕಾರಣ ಮನೆ ಜಫ್ತಿ ಮನೆಯಿಂದ ಹೊರಹಾಕಲಾಗುತ್ತಿತ್ತು. ಈ ಮಾಹಿತಿ ಪಡೆದ ದುಬೈನಲ್ಲಿ ನೆಲೆಸಿರುವ ಉದ್ಯಮಿ ಮೊಹಮದ್ ಯೂಸುಫ್ ಅಲಿ ಮಾಧ್ಯಮಗಳ ವರದಿಗೆ ಸ್ಪಂದಿಸಿ ಸಂಪೂರ್ಣ ಸಾಲ ತೀರಿಸಿದ್ದೂ ಅಲ್ಲದೇ ಕುಟುಂಬ ನಿರ್ವಹಣೆಗಾಗಿ 10 ಲಕ್ಷ ರೂ. ನೆರವು ನೀಡಿದ್ದಾರೆ.
ಕೇರಳದ ಉತ್ತರ ಪರವೂರ್ ನ ಮಡಪ್ಲತುರಥ್ ಎಂಬಲ್ಲಿ ಸ್ಥಳೀಯ ನಿವಾಸಿ ಸಂಧ್ಯಾ ಮತ್ತು ಪತಿ 2019ರಲ್ಲಿ ಮನೆ ಕಟ್ಟಲು ಮಣಪ್ಪುರಂ ಹಣಕಾಸು ಸಂಸ್ಥೆಯಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. 4.8 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಂಡು ಕುಟುಂಬ ಜೀವನ ನಡೆಸುತ್ತಿತ್ತು.
ಸಂಧ್ಯಾ ಹೆಸರನಲ್ಲಿ ಸಾಲ ಮಾಡಲಾಗಿದ್ದು, 2021ರಲ್ಲಿ ಪತಿ ತೀರಿಸಿಕೊಂಡರು. ಇದರಿಂದ 7 ಮತ್ತು 12 ವರ್ಷದ ಮಕ್ಕಳನ್ನು ಸಾಕುವ ಜೊತೆಗೆ ಸಾಲ ತೀರಿಸುವ ಹೊಣೆ ಸಂಧ್ಯಾಳ ಮೇಲೆ ಬಿತ್ತು. ಅಸಲು ಮತ್ತು ಸಾಲ ಸೇರಿ 8 ಲಕ್ಷ ರೂ. ಪಾವತಿಸಬೇಕಿತ್ತು.
ಮಣಪ್ಪುರಂ ಫೈನಾನ್ಸ್ ಹಲವಾರು ಬಾರಿ ನೋಟಿಸ್ ನೀಡಿದರೂ ಕಂತು ಕಟ್ಟಲು ಆಗದೇ ಸಂಧ್ಯಾ ಪರದಾಡಿದರು. ಸಂಧ್ಯಾ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
ಮಣಪ್ಪುರಂ ಫೈನಾನ್ಸ್ ಸೋಮವಾರ ಮನೆಯಿಂದ ಸಂಧ್ಯಾ ಕುಟುಂಬವನ್ನು ಹೊರಹಾಕಿ ಮನೆ ಜಫ್ತಿ ಮಾಡಿದ್ದರು. ಮನೆಯಲ್ಲಿದ್ದ ಔಷಧ ಸೇರಿದಂತೆ ಯಾವುದೇ ವಸ್ತುಗಳನ್ನು ಪಡೆಯಲು ಅವಕಾಶ ನೀಡದೇ ಹೊರಹಾಕಿ ಮಣಪ್ಪುರಂ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡರು.
ಈ ಘಟನೆಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿತು. ಮಾಧ್ಯಮಗಳ ವರದಿ ಗಮನಿಸಿದ ಉದ್ಯಮಿ ಮೊಹಮದ್ ಯೂಸುಫ್ ಅಲಿ ಕೂಡಲೇ ತಮ್ಮ ತಂಡವನ್ನು ಕಳುಹಿಸಿ ಸಂಧ್ಯಾರಿಗೆ ನೆರವು ನೀಡಲು ಸೂಚಿಸಿದರು. ಮನೆಯ ಸಾಲವನ್ನು ಒಂದೇ ಕಂತಿನಲ್ಲಿ ಪಾವತಿಸಿದ್ದೂ ಅಲ್ಲದೇ ಕುಟುಂಬದ ನಿರ್ವಹಣೆಗಾಗಿ ಸ್ವಂತ ಕಾಲ ಮೇಲೆ ನಿಲ್ಲಲು 10 ಲಕ್ಷ ರೂ.ವನ್ನು ಸಂಧ್ಯಾಳ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಠೇವಣಿ ಇರಿಸಿ ಮುಂದಿನ ಜೀವನ ಸುಗಮವಾಗಿ ನಡೆಸಲು ಅನುಕೂಲ ಮಾಡಿಕೊಟ್ಟರು.