ಬಾಂಗ್ಲಾದೇಶ ವಿರುದ್ಧದ ಸರಣಿ ಗೆದ್ದು ಸಂಭ್ರಮದಲ್ಲಿರುವ ಭಾರತ ತಂಡಕ್ಕೆ ನಾಳೆಯಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಇಡೀ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 16ರಿಂದ 20ರವರೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ 5 ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಉಭಯ ತಂಡಗಳು ಆಟಗಾರರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಮಳೆ ಪಂದ್ಯ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ. ನಡೆದರೂ ಅಲ್ಪಸ್ವಲ್ಪ ಸಮಯ ನಡೆಯಬಹುದಾಗಿದ್ದರೂ ಇದರಿಂದ ಫಲಿತಾಂಶ ಹೊರಬೀಳುವುದು ಅನುಮಾನ.
ಸೋಮವಾರ ತಡರಾತ್ರಿ ಆರಂಭವಾಗೊಂಡ ಮಳೆ ಮಂಗಳವಾರ ಇಡೀ ದಿನ ಸುರಿದಿದ್ದು, ಇದರಿಂದ ಭಾರತ ತಂಡದ ಆಟಗಾರರ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಮುಂದಿನ 5 ದಿನಗಳ ಕಾಲ ಇದೇ ರೀತಿ ಮಳೆಯಾಗಲಿದೆ ಎಂದು ಹಾವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ ಅಕ್ಟೋಬರ್ 16ರಂದು ಮಳೆಯ ಸಾಧ್ಯತೆ ಪ್ರಮಾಣ ಶೇ.41ರಷ್ಟು, ಅಕ್ಟೋಬರ್ 17ರಂದು ಶೇ.40, ಅಕ್ಟೋಬರ್ 18ರಂದು ಶೇ.67, ಅಕ್ಟೋಬರ್ 19ರಂದು ಶೇ.25 ಮತ್ತು ಅಕ್ಟೋಬರ್ 20ರಂದು ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ನಡೆಯುವ 5 ದಿನಗಳ ಪೈಕಿ ಒಂದು ದಿನ ಮಾತ್ರ ಶೇ.30ಕ್ಕಿಂತ ಕಡಿಮೆ ಆಗಲಿದೆ ಎಂದು ಹೇಳಿದೆ.
ಭಾರತ ತಂಡದ ಕೋಚ್ ಗೌತಮ್ ಗಂಭೀರ್ ತಂಡದ ಅಂತಿಮ 11 ಆಟಗಾರರ ಪಟ್ಟಿಯಲ್ಲಿ ಯಾರು ಇರುತ್ತಾರೆ ಎಂಬ ವಿವರ ಬಹಿರಂಗಪಡಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ನಾವು ಆಯ್ಕೆ ಮಾಡುತ್ತೇವೆ. ಸದ್ಯ ತಂಡದಲ್ಲಿ ಅತ್ಯುತ್ತಮ ಆಟಗಾರರ ಬಳಗವೇ ಇದೆ ಎಂದಿದ್ದಾರೆ.