ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲೆ ಬರೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಳ್ಳಬೇಕಿದ್ದ ಪಂದ್ಯ ಮಳೆಯಿಂದ ಮೊದಲ ದಿನದಾಟ ರದ್ದಾಗಿತ್ತು. ಗುರುವಾರ ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ವಿರಾಟ್ ಕೊಹ್ಲಿ 9 ಎಸೆತಗಳನ್ನು ಎದುರಿಸಿ ರನ್ ಖಾತೆ ತೆರೆಯುವ ಮುನ್ನವೇ ಔಟಾಗಿ ನಿರಾಸೆ ಮೂಡಿಸಿದರು.
ಮಧ್ಯಮ ವೇಗಿ ವಿಲ್ ರೂರ್ಕಿ ಅವರ ಎಸೆದ ಶಾರ್ಟ್ ಬಾಲ್ ಎದುರಿಸಲು ವಿಫಲರಾದ ಕೊಹ್ಲಿ ವಿಕೆಟ್ ಹಿಂದೆ ಗ್ಲೆನ್ ಫಿಲಿಪ್ಸ್ ಗೆ ಕ್ಯಾಚ್ ನೀಡಿ ಔಟಾದರು. ಈ ಮೂಲಕ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 38ನೇ ಬಾರಿ ಶೂನ್ಯಕ್ಕೆ ಔಟಾಗಿ ಬೇಡದ ದಾಖಲೆ ಬರೆದರು.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ನ್ಯೂಜಿಲೆಂಡ್ ತಂಡದ ಟಿಮ್ ಸೌಥಿ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದರು. ಭಾರತ ತಂಡದ ನಾಯಕ ರೋಹಿತ್ ಶರ್ಮ 33 ಬಾರಿ ಶೂನ್ಯಕ್ಕೆ ಔಟಾಗಿ ಮೂರನೇ ಸ್ಥಾನದಲ್ಲಿದ್ದಾರೆ. ರನ್ ದಾಖಲೆ ಸರದಾರರು ಶೂನ್ಯಕ್ಕೆ ಔಟಾದ ದಾಖಲೆಯಲ್ಲಿ ಬೌಲರ್ ಜೊತೆ ಸ್ಥಾನ ಪಡೆದಿರುವುದು ನಿಜಕ್ಕೂ ವಿಷಾದ ದಾಖಲೆಯೇ ಸರಿ.
ಭಾರತ ತಂಡ ಭೋಜನ ವಿರಾಮದ ವೇಳೆ ಮಳೆಯ ಅಡ್ಡಿ ನಡುವೆ 33 ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಗಾಯಗೊಂಡ ಶುಭಮನ್ ಗಿಲ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಸರ್ಫರಾಜ್ ಖಾನ್, ಕೆಎಲ್ ರಾಹುಲ್ ಮತ್ತು ಕೊಹ್ಲಿ ಶೂನ್ಯಕ್ಕೆ ಔಟಾದರೆ, ಅಕ್ಷ್ ದೀಪ್ ಬದಲಿಗೆ ಕುಲದೀಪ್ ಯಾದವ್ ಸ್ಥಾನ ಗಳಿಸಿದ್ದಾರೆ.