ಭಾರತದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದ ಭಾರತದ ನಾಲ್ಕನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರೂ ಈ ಸಾಧನೆ ಅತ್ಯಂತ ನಿಧಾನಗತಿಯಲ್ಲಿ ಮಾಡಿದ ದಾಖಲೆಗೆ ಪಾತ್ರರಾದರು.
ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಸೊನ್ನೆಗೆ ಔಟಾಗಿದ್ದ ವಿರಾಟ್ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ ಭರ್ಜರಿ ಅರ್ಧಶತಕ ದಾಖಲಿಸಿದರೂ ಇನಿಂಗ್ಸ್ ನ ಕೊನೆಯ ಎಸೆತದಲ್ಲಿ ಔಟಾಗಿ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.
ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಮೊದಲ 18 ರನ್ ಗಳಿಸಲು ಪರದಾಡಿದರು. ಆದರೆ ನಂತರ ಲಯ ಕಂಡುಕೊಳ್ಳುತ್ತಲೇ ತಮ್ಮ ಎಂದಿನ ಸಹಜ ಆಟದಿಂದ ಗಮನ ಸೆಳೆದರು. ಅಲ್ಲದೇ 102 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 70 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದರು.
ವಿರಾಟ್ ಕೊಹ್ಲಿ 9000 ರನ್ ಪೂರೈಸಿದ 4ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಕೊಹ್ಲಿ ಈ ಸಾಧನೆ ಮಾಡಲು 116 ಟೆಸ್ಟ್ ಗಳಲ್ಲಿ 197 ಇನಿಂಗ್ಸ್ ತೆಗೆದುಕೊಂಡಿದ್ದಾರೆ. 48.74ರ ಸರಾಸರಿಯಲ್ಲಿ ಅತ್ಯಂತ ನಿಧಾನವಾಗಿ ಈ ಸಾಧನೆ ಮಾಡಿದರು.
ಸಚಿನ್ ತೆಂಡೂಲ್ಕರ್ 200 ಪಂದ್ಯ 329 ಇನಿಂಗ್ಸ್ ಗಳಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ 163 ಪಂದ್ಯ 284 ಇನಿಂಗ್ಸ್ ಗಳಲ್ಲಿ 52.63ರ ಸರಾಸರಿಯಲ್ಲಿ 13,265 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸುನೀಲ್ ಗವಾಸ್ಕರ್ 125 ಟೆಸ್ಟ್ ಗಳಲ್ಲಿ 284 ಇನಿಂಗ್ಸ್ ಗಳಲ್ಲಿ 51.12ರ ಸರಾಸರಿಯಲ್ಲಿ 10,122 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 27,000 ರನ್ ಪೂರೈಸಿದ ದಾಖಲೆ ಬರೆದಿದ್ದರು. ಅದರ ಬೆನ್ನಲ್ಲೇ ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿ ಅತ್ಯಧಿಕ ಬಾರಿ (38) ಶೂನ್ಯಕ್ಕೆ ಔಟಾದ ದಾಖಲೆಯನ್ನೂ ಬರೆದಿದ್ದರು.