ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಪಕ್ಷಕ್ಕೆ ಸೇರ್ಪಡೆಯಾದ ಒಂದೇ ದಿನದಲ್ಲಿ ಸಿಎಂ ಏಕಾಂತ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಜಲ್ಮಾ ವಿಧಾನಸಭಾ ಕ್ಷೇತ್ರದ ಶ್ರೀಕಾಂತ್ ಪಂಗಾರ್ಕರ್ ನೇಮಕ ಸೇರಿದಂತೆ ಎಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ರದ್ದುಗೊಳಿಸಿ ಏಕಾಂತ್ ಶಿಂಧೆ ಆದೇಶ ಹೊರಡಿಸಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕಾಂತ್ ಶಿಂಧೆ ಬಣದ ಶಿವಸೇನೆ ಪಕ್ಷಕ್ಕೆ ಶನಿವಾರ ಸೇರ್ಪಡೆಯಾಗಿದ್ದರು.
ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆದ ಶ್ರೀಕಾಂತ್ ಪಂಗಾರ್ಕರ್ ಮಾಜಿ ಸಚಿವ ಅರ್ಜುನ್ ಖೋಡ್ಕರ್ ನೇತೃತ್ವದಲ್ಲಿ ಏಕಾಂತ್ ಶಿಂಧೆ ಬಣದ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಪರವಾಗಿ ಜಲ್ನಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು.
ಶ್ರೀಕಾಂತ್ ಪಂಗಾರ್ಕರ್ 2001ರಿಂದ 2008ರ ಅವಧಿಯಲ್ಲಿ ಶಿವಸೇನೆಯ ಜಲ್ನಾ ವಾರ್ಡ್ ಪಾಲಿಕೆ ಸದಸ್ಯರಾಗಿದ್ದರು. 2017. ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪೊಲೀಸರು ಬಂಧಿಸಿದ್ದರು.
ಪಂಗಾರ್ಕರ್ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಆಕ್ರೋಶ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ.