ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.
ವಯನಾಡು ಚುನಾವಣಾಧಿಕಾರಿಗೆ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ಆಸ್ತಿ ವಿವರ ಘೋಷಿಸಿದ್ದು, ಪತಿ ರಾಬರ್ಟ್ ವಾದ್ರಾ ಜೊತೆ ಸೇರಿ ಒಟ್ಟು 78 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ವೈಯಕ್ತಿಕ ಆಸ್ತಿ 12 ಕೋಟಿ ರೂ. ಆಗಿದ್ದರೆ, ಪತಿ ರಾಬರ್ಟ್ ವಾದ್ರಾ ಆಸ್ತಿ 65 ಕೋಟಿ ರೂ. ಆಗಿದೆ. ಇಬ್ಬರದ್ದು ಸೇರಿ ಒಟ್ಟಾರೆ ಆಸ್ತಿ 78 ಕೋಟಿ ರೂ. ಆಗಿದೆ.
52 ವರ್ಷದ ಪ್ರಿಯಾಂಕಾ 4.27 ಕೋಟಿ ರೂ. ಮೌಲ್ಯದ ಚರಾಸ್ಥಿ ಇದ್ದು, ಇದರಲ್ಲಿ ಬ್ಯಾಂಕ್ ಠೇವಣಿ, ಬ್ಯಾಂಕ್ ನಲ್ಲಿ ಇರುವ ನಗದು ಹಾಗೂ ಮ್ಯೂಚ್ಯೂವಲ್ ಫಂಡ್ ಹೂಡಿಕೆ ಹಾಗೂ ಪಿಪಿಎಫ್ ಮೊತ್ತವೂ ಸೇರಿದೆ. ಪತಿ ರಾಬರ್ಟ್ ವಾದ್ರಾ ಉಡುಗೊರೆಯಾಗಿ ನೀಡಿದ ಹೋಂಡಾ ಸಿಆರ್ ವಿ ಕಾರು, 1.5 ಕೋಟಿ ರೂ. ಮೌಲ್ಯದ 4400 ಗ್ರಾಂ ಚಿನ್ನಾಭರಣ ಇರುವುದಾಗಿ ಘೋಷಿಸಿಕೊದ್ದಾರೆ.
7.41 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು, ದೆಹಲಿ ಸಮೀಪದ ಮೆಹ್ರೂಲಿಯಲ್ಲಿ ಕೃಷಿ ಭೂಮಿ, ತೆಹರ್ರೀನ್ ನಲ್ಲಿರುವ ಫಾರ್ಮ್ ಹೌಸ್ ಕಟ್ಟಡದಲ್ಲಿ ಪಾಲು ಸೇರಿ ಒಟ್ಟು 2.10 ಕೋಟಿ ರೂ. ಮೌಲ್ಯ ಹೊಂದಿವೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ವಸತಿ ಕಟ್ಟಡ ಹೊಂದಿದ್ದು, ಇದರ ಮೌಲ್ಯ 5.63 ಕೋಟಿ ರೂ. ಆಗಿದೆ ಎಂದು ಅಫಿದಾವಿತ್ ನಲ್ಲಿ ಪ್ರಿಯಾಂಕಾ ವಿವರಿಸಿದ್ದಾರೆ.
ರಾಬರ್ಟ್ ವಾದ್ರಾ 39 ಕೋಟಿ ರೂ. ಮೌಲ್ಯದ ಚರಾಸ್ಥಿ ಇದ್ದು, 27.64 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಪತಿ ರಾಬರ್ಟ್ ವಾದ್ರಾ 10 ಕೋಟಿ ರೂ. ಸಾಲ ಹೊಂದಿದ್ದರೆ, ಪ್ರಿಯಾಂಕಾ 15.75 ಲಕ್ಷ ರೂ. ಸಾಲ ಹೊಂದಿರುವುದಾಗಿ ಅಫಿದಾವಿತ್ ನಲ್ಲಿ ತಿಳಿಸಲಾಗಿದೆ.
1989ರಲ್ಲಿ 17ನೇ ವಯಸ್ಸಿಗೆ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪರ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ರಾಜಕೀಯ ನಂಟು ಬೆಳೆಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ಸುಮಾರು 35 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ತಂದೆಗೆ ಮಾತ್ರವಲ್ಲದೇ ಸೋನಿಯಾ ಗಾಂಧಿ, ಸೋದರ ರಾಹುಲ್ ಗಾಂಧಿ ಪರವೂ ಪ್ರಚಾರ ನಡೆಸಿದ್ದಾರೆ.
ನನ್ನ 35 ವರ್ಷಗಳ ಅನುಭವದಲ್ಲಿ ತಂದೆ, ತಾಯಿ, ಸೋದರ ಅಲ್ಲದೇ ತಮ್ಮ ಪಕ್ಷದ ಸಹದ್ಯೋಗಿಗಳ ಪರ ಸಾಕಷ್ಟು ಬಾರಿ ಪ್ರಚಾರ ಮಾಡಿದ್ದೇನೆ. ಇದೇ ಮೊದಲ ಬಾರಿ ನನ್ನ ಪರವಾಗಿ ನಾನೇ ಪ್ರಚಾರ ಮಾಡುತ್ತಿದ್ದೇನೆ. 17ನೇ ವಯಸ್ಸಿಗೆ ತಂದೆಯ ಪ್ರಚಾರ ಆರಂಭಿಸಿದ ನನಗೆ 35 ವರ್ಷ ರಾಜಕೀಯದಲ್ಲಿ ಕಳೆದಿದ್ದೇನೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.