ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹೋರಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 25 ರನ್ ಗಳಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವೀರೋಚಿತ ಸೋಲುಂಡಿತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆಂಬತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಸೋಲಿನೊಂದಿಗೆ ಆರ್ ಸಿಬಿ 7 ಪಂದ್ಯಗಳಲ್ಲಿ 6ನೇ ಸೋಲಿನೊಂದಿಗೆ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಸನ್ ರೈಸರ್ಸ್ ಹೈದರಾಬಾದ್ 6 ಪಂದ್ಯಗಳಿಂದ 4 ಗೆಲುವು, 2 ಸೋಲಿನೊಂದಿಗೆ 8 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಜಿಗಿಯಿತು.
ಆರ್ ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ ಗೆ 6.2 ಓವರ್ ಗಳಲ್ಲಿ 80 ರ ಸಿಡಿಸಿ ಮಿಂಚಿನ ಆರಂಭ ನೀಡಿದರು. ಕೊಹ್ಲಿ 20 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 42 ರನ್ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ಫಾಫ್ ಡು ಪ್ಲೆಸಿಸ್ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 62 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವಿಫಲರಾಗಿದ್ದರಿಂದ ಹೀನಾಯ ಸೋಲಿನತ್ತ ಮುಖಮಾಡಿತ್ತು.
ಆರ್ ಸಿಬಿ ತಂಡದ ಫಿನಿಷರ್ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿ 83 ರನ್ ಚಚ್ಚುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಮುಗಿಲು ಮುಟ್ಟಿದ ರನ್ ಸರಾಸರಿ ಕಾಯ್ದುಕೊಳ್ಳಲು ಆಗದೇ ಕೊನೆಯ ಹಂತದಲ್ಲಿ ಎಡವಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರಾವಿಡ್ ಹೆಡ್ ಶತಕ ಸಿಡಿಸಿ ಬೃಹತ್ ಮೊತ್ತ ದಾಖಲಿಸುವ ಭರವಸೆ ಮೂಡಿದರು. ಟ್ರಾವಿಸ್ ಹೆಡ್ 41 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ ಶತಕ (102) ಸಿಡಿಸಿದರು.
ಟ್ರಾವಿಡ್ ಹೆಡ್ ನಂತರ ನಾಯಕ ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 67 ರನ್ ಸಿಡಿಸಿದರೆ, ಏಡಿಯನ್ ಮರ್ಕರಂ (32) ಮತ್ತು ಅಬ್ದುಲ್ ಸಮದ್ (ಅಜೇಯ 37) ತಂಡದ ಮೊತ್ತ 300ರ ಗಹಡಿ ದಾಟಿಸಿದರು.