ದಾನಾ ಚಂಡಮಾರುತದಿಂದ ಭಾರೀ ಮಳೆ ಗಾಳಿಯ ನಡುವೆ ರೋಗಿಯನ್ನು 2 ಕಿ.ಮೀ. ದೂರದವರೆಗೆ ಹೊತ್ತುಕೊಂಡು ಬಂದ ಆಂಬುಲೆನ್ಸ್ ಚಾಲಕ ಮಾನವೀಯತೆಯಿಂದ ಮಾದರಿಯಾದ ಅಪರೂಪದ ಘಟನೆ ಒಡಿಶಾದ ಕೇಂದ್ರಪಡ ಜಿಲ್ಲೆಯಲ್ಲಿ ನಡೆದಿದೆ.
108 ಆಂಬುಲೆನ್ಸ್ ಚಾಲಕ ರಾಜನಗರ್ ನ ಮಾನಸ್ ಕುಮಾರ್ ಮಲಿಕ್ (24) ಭಾರೀ ಮಳೆ ಗಾಳಿ ನಡುವೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಎತ್ತಿಕೊಂಡು ಹೋಗಿ ಆಂಬುಲೆನ್ಸ್ ಗೆ ಸೇರಿಸಿ ಅಲ್ಲಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಶುಕ್ರವಾರ 7.30ರ ಸುಮಾರಿಗೆ ವೈದ್ಯಕೀಯ ನೆರವಿಗೆ ಕರೆ ಬಂದಿದೆ. ತುಂಬಾ ಅಸ್ವಸ್ಥರಾಗಿ ನಡೆದಾಡಲು ಆಗದ ಸ್ಥಿತಿಯಲ್ಲಿ ಇಲ್ಲದ ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಮಾನಸ್ ಕುಮಾರ್ ಮಲಿಕ್ ತೆರಳಿದ್ದಾರೆ. ದಾನಾ ಚಂಡಮಾರುತದ ಪರಿಣಾಮ ಭಾರೀ ಮಳೆ ಗಾಳಿಯಿಂದ ಮರಗಳು ರಸ್ತೆ ಮಧ್ಯದಲ್ಲಿ ಬಿದ್ದು ಗುರಿ ತಲುಪುವ 2 ಕಿ.ಮೀ. ದೂರವೇ ಆಂಬುಲೆನ್ಸ್ ನಿಲ್ಲಿಸಬೇಕಾಯಿತು.
ಮಾನಸ್ ಮತ್ತು ಸಹಾಯಕ ನಕುಲಾ ಚರಣ್ ಮಲಿಕ್ (36) ಭಾರೀ ಮಳೆ ಗಾಳಿ ನಡುವೆಯೂ ಕೆಸರು ಗದ್ದೆಯಂತಾದ ರಸ್ತೆ, ಜಾರುತ್ತಿದ್ದ ಪ್ರದೇಶದ ನಡುವೆಯೂ ರೋಗಿ ಇದ್ದ ಸ್ಥಳ ತಲುಪಿದರು. ಮೇಲಿಂದ ಬಿದ್ದು ಬೆನ್ನು ಮೂಳೆ ಮುರಿದು ನಡೆಯಲು ಆಗದ ಸ್ಥಿತಿಯಲ್ಲಿದ್ದ ಇತಿಶ್ರೀ ರೌತ್ (23) ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ಮಾನಸ್ ಆಂಬುಲೆನ್ಸ್ ನತ್ತ ನಡೆದು ಹೋಗಿದ್ದಾರೆ.
ವಿಶೇಷ ಅಂಧರೆ ಇತಿಶ್ರೀ ರೌತ್ ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಆಂಬುಲೆನ್ಸ್ ನಲ್ಲಿ 6500 ರೂ. ನಗದು ಸಿಕ್ಕಿದ್ದು, ಅದನ್ನು ಕೂಡ ಕುಟುಂಬಕ್ಕೆ ಮಾನಸ್ ಮತ್ತು ನಕುಲಾ ಮರಳಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾನಸ್, ಜನರು ಕಷ್ಟದ ಸಮಯದಲ್ಲಿ ನೆರವಾಗಬೇಕು ಎಂಬುದು ನನ್ನ ಉದ್ಧೇಶ ಎಂದು ಪ್ರತಿಕ್ರಿಯಿಸಿದ್ದಾರೆ. ಮಾನಸ್ ಸಾಹಸ ಮಾತ್ರವಲ್ಲ ಮಾನವೀಯತೆಯನ್ನೂ ಮೆರದಿದ್ದಕ್ಕೆ ಉಪ ಮುಖ್ಯಮಂತ್ರಿ ಪಾರ್ವತಿ ಪರಿಡಾ, ಆರೋಗ್ಯ ಸಚಿವ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.