ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದು, ಐಪಿಎಲ್ ಹರಾಜಿಗೆ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ 6 ಆಟಗಾರರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸದೇ ಗೊಂದಲಕ್ಕೆ ಬಿದ್ದಿದೆ.
ಐಪಿಎಲ್ ಹರಾಜಿಗೂ ಮುನ್ನ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬೇಕಿದೆ. ಅಕ್ಟೋಬರ್ 31ರೊಳಗೆ ಪಟ್ಟಿ ಅಂತಿಮಗೊಳಿಸಿ ಐಪಿಎಲ್ ಆಡಳಿತ ಮಂಡಳಿಗೆ ನೀಡಬೇಕಿದೆ.
ಮೂಲಗಳ ಪ್ರಕಾರ ಆರ್ ಸಿಬಿ ವಿರಾಟ್ ಕೊಹ್ಲಿಯನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿದೆ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ ವೆಲ್ ಸೇರಿದಂತೆ ಯಾವುದೇ ಆಟಗಾರರನ್ನು ಉಳಿಸಿಕೊಳ್ಳಬೇಕೋ ಅಥವಾ ಕೈ ಬಿಡಬೇಕೋ ಎಂಬ ಬಗ್ಗೆ ಯಾವುದೇ ನಿರ್ಣಾಯ ಕೈಗೊಂಡಿಲ್ಲ.
ರೈಟ್ ಟು ಮ್ಯಾಚ್ ಸೇರಿದಂತೆ ಗರಿಷ್ಠ 6 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾಗಿದೆ. ಸ್ವದೇಶೀ ಹಾಗೂ ವಿದೇಶೀ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಆಟಗಾರರ ಖರೀದಿಯ ಮೊತ್ತದಲ್ಲಿ 20 ಕೋಟಿ ರೂ. ಹೆಚ್ಚಳ ಮಾಡಿರುವುದರಿಂದ ಆರ್ ಸಿಬಿ 120 ಕೋಟಿ ರೂ. ದೊಡ್ಡ ಮೊತ್ತ ಹೂಡಿಕೆ ಮಾಡಬಹುದಾಗಿದೆ. ದೊಡ್ಡ ಮೊತ್ತದ ಆಟಗಾರರನ್ನು ಉಳಿಸಿಕೊಂಡರೆ ಹರಾಜಿನಲ್ಲಿ ಸಮಸ್ಯೆ ಉಂಟಾಗಬಹುದು.
ಆರ್ ಸಿಬಿ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಕೈಬಿಟ್ಟ ಕೆಎಲ್ ರಾಹುಲ್ ಮತ್ತು ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬರಲಿದ್ದಾರೆ ಎಂದು ಹೇಳಲಾಗಿರುವ ರೋಹಿತ್ ಶರ್ಮ ಅವರನ್ನು ಸೆಳೆಯಲು ಪ್ರಯತ್ನಿಸಲಿದೆ.