ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರೂ ಪಾಸಾಗದ ಯುವತಿ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿ ಸಿಕ್ಕಿಬಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ದೆಹಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಂದು ಹೇಳಿಕೊಂಡ 24 ವರ್ಷದ ಅಂಜು ಶರ್ಮಾ ಎಂಬಾಕೆಯನ್ನು ಚುರು ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಚುರು, ಹನುಮನ್ ಗಢ್, ಫತೇಹ್ ಬಾದ್, ಸಿರ್ಸಾ ಮತ್ತು ಪಾಟಿಪಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಲವಾರು ಜನರಿಗೆ ಅಂಜು ಶರ್ಮಾ ವಂಚಿಸಿರುವುದು ಬೆಳಕಿಗೆ ಬಂದಿದೆ.
ನಕಲಿ ಗುರುತು ಪತ್ರ, ನಕಲಿ ಸಮವಸ್ತ್ರ, ವಿಐಪಿ ಪಾಸ್ ಹೊಂದಿದ್ದ ಯುವತಿ ತಾನು ಹಿರಿಯ ಅಧಿಕಾರಿ ಆಗಿದ್ದು, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾಳೆ.
ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಸಾಹ್ವಾ ಪೊಲೀಸರು ತನಿಖೆ ಕೈಗೊಂಡಿದ್ದು ಅಂಜು ಶರ್ಮಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕೆ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫೇಲಾಗಿದ್ದಳು. ಆದರೆ ನನಗೆ ಸರಕಾರಿ ಕೆಲಸ ಸಿಕ್ಕಿದೆ ಎಂಬು ಸಂಬಂಧಿಕರು, ಕುಟುಂಬದವರು ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಪ್ರಭಾವ ಬೀರಿ ಕೆಲಸ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದಳು. ಈ ರೀತಿ ಮೂರು ವರ್ಷಗಳಿಂದ ಹಲವಾರು ಜನರಿಗೆ ವಂಚಿಸಿರುವುದು ತಿಳಿದು ಬಂದಿದೆ.
ರಾಜಸ್ಥಾನದ ಬನೇರಾದ ಅರ್ಜುನ್ ಲಾಲ್ ನಾಯ್ ಎಂಬಾತ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಹುದ್ದೆ ಕೊಡಿಸುವುದಾಗಿ 12.93 ಲಕ್ಷ ರೂ. ಪಡೆದು ವಂಚಿಸಿದ್ದು, ಈತ ನೀಡಿದ ದೂರು ಆಧರಿಸಿ ಅಂಜು ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.