ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನವನ್ನು ವಿರಾಟ್ ಕೊಹ್ಲಿ ಮರಳುವ ಸಾಧ್ಯತೆ ಇದೆ.
ಐಪಿಎಲ್ ಫ್ರಾಂಚೈಸಿಗಳು ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅಕ್ಟೊಬರ್ 31 ಕೊನೆಯ ದಿನವಾಗಿದೆ. ಎಲ್ಲಾ ಫ್ರಾಂಚೈಸಿಗಳು ಆಟಗಾರರ ಪಟ್ಡಿ ಅಂತಿಮಗೊಳಿಸಿದ್ದು, ಪಟ್ಟಿ ಅಂತಿಮಗೊಳಿಸದ ಏಕೈಕ ತಂಡ ಆರ್ ಸಿಬಿ ಆಗಿದೆ.
ಆರ್ ಸಿಬಿ ತಂಡ ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ ವೆಲ್ ಅವರನ್ನು ಕೈಬಿಡಲು ನಿರ್ಧರಿಸಿದ್ದು, ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡ ರೋಹಿತ್ ಶರ್ಮ ಕೂಡ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದು ಹರಾಜಿಗೆ ಬರಲಿದ್ದಾರೆ.
ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮ ಅಲ್ಲದೇ ಗುಜರಾತ್ ಟೈಟಾನ್ಸ್ ತಂಡ ಶುಭಮನ್ ಗಿಲ್ ಅವರನ್ನು ಸೆಳೆದು ನಾಯಕ ಪಟ್ಟ ನೀಡಲು ಆರ್ ಸಿಬಿ ಆಡಳಿತ ಮಂಡಳಿ ಪ್ರಯತ್ನಿಸಿದೆ.
ಕೊನೆ ಗಳಿಗೆಯಲ್ಲಿ ಗಿಲ್ ಗುಜರಾತ್ ಟೈಟಾನ್ಸ್ ತಂಡದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಕೆಎಲ್ ರಾಹುಲ್ ತಂಡಕ್ಕೆ ಬಂದರೂ ನಾಯಕ ಸ್ಥಾನ ನೀಡದೇ ಬ್ಯಾಟಿಂಗ್ ಕಡೆ ಗಮನ ಹರಿಸಲು ಸೂಚಿಸುವ ಸಾಧ್ಯತೆ ಇದೆ.
ರೋಹಿತ್ ಶರ್ಮ ಬಂದರೆ ನಾಯಕ ಪಟ್ಟ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ ರೋಹಿತ್ ಶರ್ಮ ಸೆಳೆಯಲು ಫ್ರಾಂಚೈಸಿಗಳ ನಡುವೆ ಪೈಪೋಟಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ತಂಡಕ್ಕೆ ಬರುವುದು ಕಷ್ಡ ಸಾಧ್ಯ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಗೆ ಮತ್ತೆ ನಾಯಕ ಪಟ್ಟ ನೀಡಲು ಆಡಳಿತ ಮಂಡಳಿ ಉದ್ದೇಶಿಸಿದೆ. ಈಗಾಗಲೇ ಕೊಹ್ಲಿ ಅಂತಾರಾಷ್ಟ್ರೀಯ ಟಿ-20ಗೆ ವಿದಾಯ ಹೇಳಿರುವುದರಿಂದ ಅವರ ಮೇಲೆ ಮೊದಲಿನಂತೆ ಒತ್ತಡ ಇರುವುದಿಲ್ಲ. ಇದರಿಂದ ತಂಡ ಮುನ್ನಡೆಸುವುದು ಸುಲಭವಸಗಬಹುದು ಎಂದು ಮೂಲಗಳು ತಿಳಿಸಿವೆ.