ಬಾಲಿವುಡ್ ನಟ ಶಾರೂಖ್ ಖಾನ್ ನವೆಂಬರ್ 2ರಂದು ಜನ್ಮದಿನ ಆಚರಿಸಿಕೊಂಡ ವೇಳೆ ಸಿಗರೇಟ್ ಸೇವನೆ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಅಚ್ಚರಿಯ ಸಿಹಿಸುದ್ದಿ ನೀಡಿದ್ದಾರೆ.
ಸಿಗರೇಟ್ ಸೇವನೆಯ ದಾಸನಾಗಿರುವ ಶಾರೂಖ್ ಖಾನ್ ದಿನಕ್ಕೆ ಕನಿಷ್ಠ 100 ಸಿಗರೇಟ್ ಸೇದುತ್ತಾ ಬಂದಿದ್ದಾರೆ. ಜನ್ಮದಿನದ ವೇಳೆ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಶಾರೂಖ್ ಖಾನ್, ಸಿಗರೇಟು ತ್ಯಜಿಸುವುದಾಗಿ ಹೇಳಿದ್ದಾರೆ.
ಒಂದು ಒಳ್ಳೆಯ ವಿಷಯ ಏನು ಗೊತ್ತಾ? ನಾನೀಗ ಸಿಗರೇಟು ಸೇದುತ್ತಿಲ್ಲ. ಮುಂದೆಯೂ ಸೇದುವುದಿಲ್ಲ ಎಂದು ಶಾರೂಖ್ ಖಾನ್ ಹೇಳಿಕೊಂಡಿದ್ದಾರೆ.
ಸಿಗರೇಟು ತ್ಯಜಿಸಿದ ನಂತರ ಉಸಿರಾಡಲು ಕಷ್ಟ ಆಗುತ್ತದೆ ಎಂದು ಭಾವಿಸಿದ್ದೆ. ಅದರಿಂದ ಸಾಕಷ್ಟು ಪರಿಣಾಮಗಳನ್ನು ಕೂಡ ಎದುರಿಸುತ್ತಿದ್ದೇನೆ. ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.
2011ರ ಸಂದರ್ಶನದಲ್ಲಿ ನಾನು ದಿನಕ್ಕೆ 100 ಸಿಗರೇಟು ಸೇದುತ್ತೇನೆ. ನಾನು ಊಟ ಮಾಡುವುದನ್ನು ಮರೆತುಬಿಡುತ್ತೇನೆ. ನೀರು ಸಹ ಕೂಡಿಯುವುದಿಲ್ಲ. ಸುಮಾರು ಪ್ಯಾಕ್ ಸಿಗರೇಟು ಸೇದುತ್ತಿದ್ದೇನೆ ಎಂದು ಶಾರೂಖ್ ಖಾನ್ ಹೇಳಿಕೊಂಡಿದ್ದರು.
ನಾನು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನನ್ನನ್ನು ಮಾದರಿಯಾಗಿ ಈ ವಿಷಯದಲ್ಲಿ ಪರಿಗಣಿಸಬೇಡಿ. ನಾನು ಇದರಿಂದ ಹೇಗೆ ಹೊರಗೆ ಬರಬೇಕು ಎಂದು ಯೋಚಿಸುತ್ತಿಲ್ಲ ಎಂದು ಅವರು ನುಡಿದರು.
ಶಾರೂಖ್ ಖಾನ್ ಇದೀಗ ಪುತ್ರಿ ಸುಹಾನಾ ಖಾನ್ ಜೊತೆ ಮೊದಲ ಬಾರಿ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮೊದಲ ಬಾರಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.