ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣವನ್ನು ಲೋಕಾಯುಕ್ತ ಬದಲು ಸಿಬಿಐಗೆ ವಹಿಸುವ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಭಾಮೈದ ಸೇರಿದಂತೆ ಮೂವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸ್ನೇಹಮಯಿ ಕೃಷ್ಣ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಲೋಕಾಯುಕ್ತ ಇದುವರೆಗೆ ನಡೆಸಿದ ತನಿಖೆಯ ವರದಿ ನೀಡುವಂತೆ ಸೂಚಿಸಿದ್ದು, ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಲೋಕಾಯುಕ್ತ ನವೆಂಬರ್ 24ರವರೆಗೆ ತನಿಖೆ ನಡೆಸಬಹುದು. ಇದುವರೆಗೆ ನಡೆಸಿದ ತನಿಖೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಅಲ್ಲದೇ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿರುವ ಸಿಎಂ ಪತ್ನಿ ಪಾರ್ವತಿ, ಭಾಮೈದ ದೇವರಾಜು ಸೇರಿದಂತೆ ಮೂವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಡಾದಲ್ಲಿ ನಡೆದ ಸೈಟು ಹಂಚಿಕೆ ಕುರಿತ ಹಗರಣದಲ್ಲಿ ಎ-1 ಆರೋಪಿ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದ್ದು, ಬುಧವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಾಯುಕ್ತ ಪ್ರಕರಣದ ಎಲ್ಲಾ ಆರೋಪಿಗಳ ವಿಚಾರಣೆ ಪೂರ್ಣಗೊಳಿಸಿದ್ದು, ಸಿದ್ದರಾಮಯ್ಯ ಅವರ ವಿಚಾರಣೆ ಮಾತ್ರ ಬಾಕಿ ಉಳಿದಿದೆ.