ನಾಯಕ ಅನುಸ್ತುಪ್ ಮಂಜುಂದಾರ್ ಸಿಡಿಸಿದ ಶತಕದ ನೆರವಿನಿಂದ ಬೆಂಗಾಲ್ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬೃಹತ್ ಮೊತ್ತದತ್ತ ಸಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಬೆಂಗಾಲ್ ತಂಡ ದಿನಾದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿದೆ.
ವಾಸುಕಿ ಕೌಶಿಕ್ ಮಾರಕ ದಾಳಿ ನೆರವಿನಿಂದ ಬೆಂಗಾಲ್ 21 ರನ್ ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭಿಸಿತು. ಆದರೆ ಸುದೀಪ್ ಚಟರ್ಜಿ (55) ಮತ್ತು ಅನುಸ್ತುಪ್ ಮಂಜುಂದಾರ್ ಮೂರನೇ ವಿಕೆಟ್ ಗೆ 100 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ನಂತರ 4ನೇ ವಿಕೆಟ್ ಗೆ ಅನುಸ್ತುಪ್ ಮತ್ತು ಶಹಬಾಜ್ ಅಹ್ಮದ್ 80 ರನ್ ಪೇರಿಸಿದರು. ಅನುಸ್ತುಪ್ 164 ಎಸೆತಗಳಲ್ಲಿ 16 ಬೌಂಡರಿ ಒಳಗೊಂಡ 101 ರನ್ ಬಾರಿಸಿ ಔಟಾದರು. ಶಹಬಾಜ್ ಅಹ್ಮದ್ 103 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 54 ರನ್ ಬಾರಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಕರ್ನಾಟಕದ ಪರ ವಾಸುಕಿ ಕೌಶಿಕ್ 3 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಗಳಿಸಿದರು.